Advertisement

ಅಭಿವೃದ್ಧಿಯೇ ಬಿಜೆಪಿ ಗೆಲುವಿಗೆ ಶ್ರೀರಕ್ಷೆ: ರತ್ನಾಕರ್‌ ಹೆಗ್ಡೆ

08:50 AM Mar 29, 2018 | Team Udayavani |

ಕಾರ್ಕಳ: ಬಿಜೆಪಿ ಕಾರ್ಕಳ ಕ್ಷೇತ್ರ ಸಮಿತಿ ವತಿಯಿಂದ 2018ರ ವಿಧಾನಸಭೆ ಚುನಾವಣೆಯ ಪೂರ್ವ ತಯಾರಿ ಪ್ರಯುಕ್ತ ಕ್ಷೇತ್ರದ 204 ಬೂತ್‌ಗಳಿಂದ ಇಬ್ಬರು ಪ್ರಮುಖ ಕಾರ್ಯಕರ್ತರನ್ನು ಸೇರಿಸಿ ನನ್ನ ಬೂತ್‌ಗೆ ನಾನೇ ಅಭ್ಯರ್ಥಿ ಎಂಬ ಘೋಷಣೆಯೊಂದಿಗೆ ಒಂದು ದಿನದ ಚುನಾವಣಾ ಮಾಹಿತಿ ಕಾರ್ಯಾಗಾರ ಹಿರ್ಗಾನ ಲಕ್ಷ್ಮೀಪುರ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ  ಮಾ. 24ರಂದು ನಡೆಯಿತು.

Advertisement

ಜಿಲ್ಲಾಧ್ಯಕ್ಷ ಮಟ್ಟಾರ್‌ ರತ್ನಾಕರ ಹೆಗ್ಡೆ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಕಾರ್ಕಳ ವಿಧಾನಸಭಾ ಕ್ಷೇತ್ರದ ಪ್ರತೀ ಬೂತ್‌ನಲ್ಲಿ ಸದೃಢ, ಪ್ರಾಮಾಣಿಕ, ಪಕ್ಷ  ನಿಷ್ಠೆ ಇರುವ ಕಾರ್ಯಕರ್ತರ ತಂಡ ಚುನಾವಣೆ ಕಾರ್ಯಾಚರಣೆ ಪ್ರಾರಂಭ ಮಾಡಿದೆ. ಬಿಜೆಪಿ ತತ್ತ ಆದರ್ಶಗಳಿಗೆ ಸ್ಪಂದಿಸಿ ಕೆಲಸ ಮಾಡುವ ಉತ್ಸಾಹದಲ್ಲಿದ್ದಾರೆ. ಯಾವುದೇ ಅಮಿಷ, ಜಾತಿಯ ಪ್ರಭಾವ ಅಥವಾ ಹಣದ ಆಸೆಗೆ ಬಲಿಯಾಗದಿರುವಷ್ಟು   ಪ್ರಬುದ್ಧತೆ ನಮ್ಮ ಕಾರ್ಯಕರ್ತರಲ್ಲಿ ಮತ್ತು ಬಿಜೆಪಿ ಬೆಂಬಲಿಸುವ ಮತದಾರರಲ್ಲಿ ಇರುವುದು ಸ್ಪಷ್ಟವಾಗಿದೆ. ಕಾರ್ಕಳ ಕ್ಷೇತ್ರದಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ ನಡೆದ ಅಭಿವೃದ್ಧಿ ಚಟುವಟಿಕೆಗಳು ಬಿಜೆಪಿ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದರು.

ಪ್ರತಿ ಬೂತ್‌ನ ಜವಾಬ್ದಾರಿ ಹೊಂದಿರುವ ಇಬ್ಬರು ಪ್ರಮುಖರಿಗೆ ತಮ್ಮ ಬೂತ್‌ ಮಟ್ಟದಲ್ಲಿ ಚುನಾವಣೆಯನ್ನು ನಿರ್ವಹಣೆ, ಬೂತ್‌ ಬಲವರ್ಧನೆಯ ಕೆಲಸ ಕಾರ್ಯಗಳ ಬಗ್ಗೆ ಶಾಸಕ ವಿ. ಸುನಿಲ್‌ ಕುಮಾರ್‌ ಮಾಹಿತಿ ನೀಡಿ, ತನ್ನ ಬೂತ್‌ಗೆ ತಾನೇ ಅಭ್ಯರ್ಥಿ ಎಂಬ ನೆಲೆಯಲ್ಲಿ ತಳಮಟ್ಟದಲ್ಲಿ ಪಕ್ಷ ನಿಷ್ಟೆಯೊಂದಿಗೆ ಕೆಲಸ ನಿರ್ವಹಿಸಬೇಕು. ಅಭಿವೃದ್ಧಿ ಚಟುವಟಿಕೆಗೆ ಜನ ಬೆಂಬಲ, ಕೇಂದ್ರ ಸರಕಾರದ ಸಾಧನೆಗಳನ್ನು ಮತ್ತು ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿ ಮತ್ತು ವಿವಿಧ ವೈಫ‌ಲ್ಯಗಳನ್ನು ಮತದಾರರ ಗಮನಕ್ಕೆ ತರಬೇಕು ಎಂದರು.

ಪಕ್ಷದ ಹಿರಿಯ ಮಾರ್ಗದರ್ಶಕ, ವಕೀಲರಾದ ಎಂ.ಕೆ. ವಿಜಯ ಕುಮಾರ್‌ ಪಕ್ಷ ಸಂಘಟನೆ ಬಗ್ಗೆ ಮಾತನಾಡಿದರು. ಕ್ಷೇತ್ರಾಧ್ಯಕ್ಷ ಮಣಿರಾಜ ಶೆಟ್ಟಿ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಉಪಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ, ಕ್ಷೇತ್ರ ಉಸ್ತುವಾರಿ ಗುರುಪ್ರಸಾದ್‌ ಶೆಟ್ಟಿ, ರೇಶ್ಮಾ ಉದಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಮಾರ್‌ ಸ್ವಾಗತಿಸಿ, ಕಾರ್ಯದರ್ಶಿ ನವೀನ್‌ ನಾಯಕ್‌ ನಿರೂಪಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next