ಶಿವಮೊಗ್ಗ: ಶಿರಾ ಮತ್ತು ಆರ್.ಆರ್ ನಗರ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಪರಿಷತ್ ಚುನಾವಣೆಯಲ್ಲಿಯೂ ಬಿಜೆಪಿಗೆ ನಿರೀಕ್ಷೆ ಮೀರಿದ ಬೆಂಬಲವಿದ್ದು ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಹೇಳಿಕೆಗಳು ನುರಿತ ರಾಜಕಾರಣಿಗಳು ಮಾಡುವ ಟೀಕೆ ಅಲ್ಲ. ಅವರು ಬಳಸುವ ಭಾಷೆ ನಮಗೆ ಹೇಳಲು ನಾಚಿಕೆ ಆಗುತ್ತದೆ. ಬಳಸುವ ಭಾಷೆಯಿಂದಲೇ ಮತದ ಮೇಲೆ ಪ್ರಭಾವ ಬೀರಲಿದ್ದು, ಅವರಿಗೆ ಉತ್ತರ ದೊರಕಲಿದೆ ಎಂದರು.
ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯ ಬಗ್ಗೆ ಕಾಂಗ್ರೆಸ್ ಆರೋಪವಾಗಿ ಮಾತನಾಡಿ, ಸೋಲುವ ಭಯದಿಂದ ಈ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಅವರ ಹೇಳಿಕೆಗಳೇ ಶಿರಾ ಕ್ಷೇತ್ರದಲ್ಲಿ ಸೋಲುವುದನ್ನು ಒಪ್ಪಿಕೊಂಡಂತೆ ಆಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಪಶ್ಚಿಮ ಪದವೀಧರ ಕ್ಷೇತ್ರ: ಅಪಘಾತವಾಗಿದ್ದರೂ, ಆ್ಯಂಬುಲೆನ್ಸ್ ನಲ್ಲಿ ಬಂದು ಮತಹಾಕಿದ ವ್ಯಕ್ತಿ
ಗ್ರಾಪಂ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಸಿದ್ದವಿದೆ. ರಾಜ್ಯದ 6,021 ಗ್ರಾ.ಪಂ ಚುನಾವಣೆ ನಡೆಸಿದರೆ ಕೋವಿಡ್ ಹೆಚ್ಚಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕಾಗಿ ಗ್ರಾಮೀಣ ಪ್ರದೇಶದ ಜನತೆ ಚುನಾವಣೆ ಮುಂದೂಡಲು ಮನವಿ ಮಾಡಿದ್ದಾರೆ. ಆದರೆ, ನ್ಯಾಯಾಲಯ ಮತ್ತು ಚುನಾವಣಾ ಆಯೋಗ ನೀಡುವ ನಿರ್ದೇಶನಕ್ಕೆ ನಾವು ಬದ್ದರಾಗಿರಬೇಕಿದೆ.
ಚುನಾವಣೆ ಮುಂದೂಡಲು ಬಿಜೆಪಿ ಸೇರಿದಂತೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಅಭಿಪ್ರಾಯ ಕೂಡ ಹೌದು. ಚುನಾವಣೆ ಮುಂದೂಡುವ ನಿಟ್ಟಿನಲ್ಲಿ ಸ್ಪಷ್ಟ ನಿರ್ಧಾರ ಶೀಘ್ರವೇ ಅಗಬೇಕಿದೆ. ಆರೋಗ್ಯ ಸಚಿವ ಸುಧಾಕರ್ ಮಾರ್ಚ್ ವರೆಗೂ ಚುನಾವಣೆ ಮುಂದೂಡುವಂತೆ ಹೇಳಿದ್ದಾರೆ. ಇದು ಕೇವಲ ಅಭಿಪ್ರಾಯ ಅಲ್ಲ. ಗ್ರಾಮೀಣ ಪ್ರದೇಶದ ಜನತೆಯ ಅಭಿಪ್ರಾಯ ಕೂಡ ಎಂದು ಈಶ್ವರಪ್ಪ ತಿಳಿಸಿದರು.
ಇದನ್ನೂ ಓದಿ: ಅಕ್ಟೋಬರ್ 31ರಂದು ಬಾನಂಗಳದಲ್ಲಿ “ನೀಲಿ ಚಂದ್ರನ” ವಿಸ್ಮಯ: ಏನಿದು ಹಂಟರ್ ಮೂನ್?