Advertisement

ಮಹಿಳಾ ಸಮಾನತೆ ಕುರಿತು ಬಿಜೆಪಿ ದ್ವಿಮುಖ ನೀತಿ

07:51 AM Jan 07, 2019 | Team Udayavani |

ದಾವಣಗೆರೆ: ಒಂದೆಡೆ ಮಹಿಳಾ ಸಮಾನತೆಗೆ ಬಗ್ಗೆ ಮಾತನಾಡುವ ಬಿಜೆಪಿ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ವಿರೋಧಿಸುತ್ತಿದೆ ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆ.ಸಿ.ಟಿ.ಯು) ಮುಖಂಡ ಎಚ್‌.ಕೆ. ರಾಮಚಂದ್ರಪ್ಪ ದೂರಿದ್ದಾರೆ.

Advertisement

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆ.ಸಿ.ಟಿ.ಯು) ನೇತೃತ್ವದಲ್ಲಿ ಜ. 8 ಮತ್ತು 9 ರಂದು ಕರೆ ನೀಡಿರುವ ರಾಷ್ಟ್ರ ವ್ಯಾಪಿ ಹರತಾಳ, ಮುಷ್ಕರ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಹೊಂಡದ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಒಂದು ಕಡೆ ಮಹಿಳಾ ಸಮಾನತೆ, ಇನ್ನೊಂದೆಡೆ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆ ಪ್ರವೇಶಿಸುವ ಕುರಿತು ಬಿಜೆಪಿಯ ವಿರೋಧಿ ಧೋರಣೆ ನೋಡಿದರೆ ಬೇಟಿ ಪಢಾವೋ… ಬೇಟಿ ಬಚಾವೋ… ಯೋಜನೆಗೆ ಅರ್ಥ ಏನು ಎಂದು ಪ್ರಶ್ನಿಸಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರದಲ್ಲಿ ದೇಶದ ಆರ್ಥಿಕ ಸಾರ್ವಭೌಮತೆಗೆ ಧಕ್ಕೆ ತರುವ ನೀತಿ ಜಾರಿಗೊಳಿಸುತ್ತಿದೆ. ಏಕಾಏಕಿ ಕೈಗೊಂಡ ನೋಟು ಅಮಾನ್ಯಿಕರಣ ನೀತಿಯಿಂದ ಸಣ್ಣ ಪುಟ್ಟ ವ್ಯಾಪಾರಸ್ಥರು ಅಕ್ಷರಶಃ ಬೀದಿ ಪಾಲಾಗುತ್ತಿದ್ದಾರೆ ಎಂದು ದೂರಿದರು.

ಸ್ವದೇಶಿ ಮಂತ್ರದ ಬಗ್ಗೆ ಮಾತನಾಡುವ ಬಿಜೆಪಿ ವಿದೇಶಿ ಮತ್ತು ದೇಶದ ಬಂಡವಾಳಶಾಹಿಗಳಿಗೆ ಎಲ್ಲಾ ಕಡೆಯಿಂದ ಅನುಕೂಲ ಆಗುವಂತಹ ನೀತಿ ರೂಪಿಸುತ್ತಿದೆ. ವಾಲ್‌ಮಾರ್ಟ್‌ ನಂತರ ಬೃಹತ್‌ ಬಂಡವಾಳಶಾಹಿ ಕಂಪನಿಗಳ ಪ್ರವೇಶದಿಂದ ಸಣ್ಣ ಪುಟ್ಟ ವ್ಯಾಪಾರಿಗಳು ದುಡಿಮೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಮುಂದೆ ಅದೇ ವ್ಯಾಪಾರಿಗಳು ಬಂಡವಾಳಶಾಹಿಗಳ ಕೈ ಕೆಳಗೆ ಕೆಲಸ ಮಾಡುವ ದಿನಗಳು ದೂರವೇನಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಸದಾ ಮೇಕ್‌ ಇನ್‌ ಇಂಡಿಯಾ… ಯೋಜನೆ ಬಗ್ಗೆ ಮಾತನಾಡುತ್ತಾರೆ. ಆದರೆ, ಎಲ್ಲಾ ರೀತಿಯ ಬೆಂಬಲ, ಸಹಕಾರ ನೀಡುವುದು ಮಾತ್ರ ವಿದೇಶಿ ಕಂಪನಿಗಳಿಗೆ. ಹಾಗಾದರೆ ಮೇಕ್‌ ಇನ್‌ ಇಂಡಿಯಾಕ್ಕೆ ಅರ್ಥ ಏನು ಎಂಬುದಕ್ಕೆ ಅವರೇ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

Advertisement

ಭಾರತದಲ್ಲಿ, ಅದೂ ನಮ್ಮ ಬೆಂಗಳೂರಿನ ಎಚ್‌ಎಎಲ್‌ ಕಂಪನಿಗೆ ರಫೇಲ್‌ನಂತಹ ಯುದ್ಧ ವಿಮಾನ ತಯಾರಿಸುವ ಎಲ್ಲಾ ಶಕ್ತಿ ಇದ್ದರೂ ಮೋದಿ ತಮಗೆ ಬೇಕಾದ ಅಂಬಾನಿ ಸಹೋದರರ ಕಂಪನಿಗೆ ವಹಿಸಿಕೊಡುವ ಮೂಲಕ ಸಾವಿರಾರು ಜನರ ಕೆಲಸ ಕಿತ್ತುಕೊಂಡಿದ್ದಾರೆ ಎಂದು ದೂರಿದರು. 

ಲೋಕಸಭಾ ಚುನಾವಣೆಗೆ ಮುನ್ನ ಅಣ್ಣಾ ಹಜಾರೆಯವರು ಲೋಕಪಾಲ್‌… ಜಾರಿಗೆ ಒತ್ತಾಯಿಸಿ ಹೋರಾಟ ನಡೆಸಿದ್ದ ಸಂದರ್ಭದಲ್ಲಿ ತಾವು ಅಧಿಕಾರಕ್ಕೆ ಬಂದರೆ ಲೋಕ್‌ಪಾಲ್‌ ಜಾರಿಗೆ ತರುವುದಾಗಿ ಬಿಜೆಪಿ ಮುಖಂಡರು ಹೇಳುತ್ತಿದ್ದರು. ಅಧಿಕಾರಕ್ಕೆ ಬಂದ ನಂತರ ಲೋಕಪಾಲ್‌ ಬಗ್ಗೆ ಚಕಾರವೇ ಎತ್ತುತ್ತಿಲ್ಲ ಎಂದು ದೂರಿದರು.

ಎಐಯುಟಿಯುಸಿ ಮುಖಂಡ ಮಂಜುನಾಥ್‌ ಕೈದಾಳೆ ಮಾತನಾಡಿ, ಬಿಜೆಪಿ ನೇತೃತ್ವದ ಸರ್ಕಾರ ಅತ್ಯಂತ ರಭಸದಿಂದ ಜಾರಿಗೆ ತರುತ್ತಿರುವ ನೀತಿಗಳ ದುಷ್ಪರಿಣಾಮದಿಂದ ದೇಶಕ್ಕೆ ಅನ್ನ ನೀಡುವ ಅನ್ನದಾತರು, ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕರು, ಸೇವೆಗಳನ್ನು ಮಾಡುವ ನೌಕರರು, ಕೂಲಿ ನಂಬಿರುವ ಕಾರ್ಮಿಕರು ಗಂಭೀರವಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ದೂರಿದರು.

ಕೇಂದ್ರ ಸರ್ಕಾರದ ಜನ, ರೈತ, ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ, ಕನಿಷ್ಟ ವೇತನ ಜಾರಿಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆ.ಸಿ.ಟಿ.ಯು) ಜ. 8 ಮತ್ತು 9 ರಂದು ಕರೆ ನೀಡಿರುವ ರಾಷ್ಟ್ರ ವ್ಯಾಪಿ ಹರತಾಳ, ಮುಷ್ಕರಕ್ಕೆ ಸರ್ವರೂ ಬೆಂಬಲಿಸುವ ಮೂಲಕ ಕೇಂದ್ರ ಸರ್ಕಾಕ್ಕೆ ತಕ್ಕ ಎಚ್ಚರಿಕೆ ನೀಡಬೇಕು ಎಂದು ಮನವಿ ಮಾಡಿದರು.

ಜೆ.ಸಿ.ಟಿ.ಯು ಮುಖಂಡರಾದ ಕೆ.ಎಲ್‌. ಭಟ್‌, ಆನಂದರಾಜ್‌, ಆವರಗೆರೆ ಚಂದ್ರು, ಆವರಗೆರೆ ವಾಸು, ಕೆ. ಬಾನಪ್ಪ, ವಿಶಾಲಾಕ್ಷೀ ಮೃತ್ಯುಂಜಯ, ಎಂ.ಬಿ. ಶಾರದಮ, ಸರೋಜ, ಐರಣಿ ಚಂದ್ರು, ಬಾಡ ಇ. ಶ್ರೀನಿವಾಸ್‌, ಉಮೇಶ್‌ ಇತರರು ಇದ್ದರು. ಅಖ್ತರ್‌ ರಜಾ ವೃತ್ತದಲ್ಲೂ ಬಹಿರಂಗ ಸಭೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next