Advertisement

Shobha Karandlaje: ಸೋಮಶೇಖರ್‌ ಕ್ಷೇತ್ರದಲ್ಲಿ ಶೋಭಾಗೆ 1.14 ಲಕ್ಷ ಲೀಡ್‌!

12:11 PM Jun 06, 2024 | Team Udayavani |

ಬೆಂಗಳೂರು: ಬೆಂಗಳೂರು ಉತ್ತರದಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ನಿರಾಯಸ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನಿಂದ ಗೆದ್ದು ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿರುವ ಕೃಷ್ಣಬೈರೇಗೌಡ ಮತ್ತು ಬೈರತಿ ಸುರೇಶ್‌ ಅವರ ಕ್ಷೇತ್ರದಲ್ಲಿಯೂ ಬಿಜೆಪಿ 2023ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಹೆಚ್ಚು ಮತ ಪಡೆದಿದೆ.

Advertisement

ಕ್ಷೇತ್ರದಲ್ಲಿನ ಬಿಜೆಪಿ ಶಾಸಕರು ತಾವು ಪಡೆದಿದ್ದ ಮತಕ್ಕಿಂತ ಹೆಚ್ಚು ಮತಗಳನ್ನು ಲೋಕಸಭೆಯಲ್ಲಿ ಬಿಜೆಪಿಗೆ ವರ್ಗಾಯಿಸಲು ಯಶಸ್ವಿ ಆಗಿದ್ದರೆ, ಕಾಂಗ್ರೆಸ್‌ನ ಎ.ಸಿ. ಶ್ರೀನಿವಾಸ್‌ ಹೊರತುಪಡಿಸಿ ಸಚಿವರಾದ ಕೃಷ್ಣಬೈರೇಗೌಡ ಮತ್ತು ಬೈರತಿ ಸುರೇಶ್‌ ಎಡವಿದ್ದಾರೆ. ಇನ್ನು ಯಶವಂತಪುರದಲ್ಲಂತೂ ಬಿಜೆಪಿಯಿಂದ ಗೆದ್ದು ಸದ್ಯ ಕಾಂಗ್ರೆಸ್‌ ನಾಯಕರ ಜೊತೆ ಓಡಾಡುತ್ತಿರುವ ಎಸ್‌.ಟಿ. ಸೋಮಶೇಖರ್‌ ಅವರ ಕ್ಷೇತ್ರದಲ್ಲಿ ಶೋಭಾ ಕಾಂಗ್ರೆಸ್‌ ಅಭ್ಯರ್ಥಿಗಿಂತ 1.14 ಲಕ್ಷ ಮತಗಳನ್ನು ಹೆಚ್ಚು ಪಡೆದಿದ್ದಾರೆ.

ಈ ಕ್ಷೇತ್ರದಲ್ಲಿ ಕೆ.ಆರ್‌.ಪುರ. ಮಲ್ಲೇಶ್ವರ, ಮಹಾಲಕ್ಷ್ಮೀ ಲೇಔಟ್‌, ದಾಸರಹಳ್ಳಿ ಮತ್ತು ಯಶವಂತಪುರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಕಾಂಗ್ರೆಸ್‌ ನಿಂದ ಪುಲಕೇಶಿ ನಗರದಲ್ಲಿ ಎ.ಸಿ. ಶ್ರೀನಿವಾಸ್‌ ಶಾಸಕರಾಗಿದ್ದಾರೆ. ಹೆಬ್ಬಾಳದ ಶಾಸಕ ಬೈರತಿ ಸುರೇಶ್‌ ಮತ್ತು ಬ್ಯಾಟರಾಯನಪುರದ ಶಾಸಕ ಕೃಷ್ಣಬೈರೇಗೌಡ ಸಚಿವರಾಗಿದ್ದಾರೆ. ಆದರೆ ಪುಲಕೇಶಿನಗರ ಮತ್ತು ಹೆಬ್ಟಾಳ ಹೊರತು ಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವುದು ಒಂದೆಡೆಯಾದರೆ ಎಲ್ಲ ಕ್ಷೇತ್ರಗಳಲ್ಲಿಯೂ ವಿಧಾನಸಭಾ ಚುನಾವಣೆಯಲ್ಲಿ ಗಳಿಸಿದ ಮತಗಳಿಗಿಂತ ಹೆಚ್ಚು ಮತ ಬಿಜೆಪಿ ಪಡೆದಿದೆ. ಬ್ಯಾಟರಾಯನಪುರ ಕ್ಷೇತ್ರ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಭದ್ರಕೋಟೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಅವರು 1.60 ಲಕ್ಷ ಮತ ಪಡೆದಿದ್ದರು. ಆದರೆ ಅವರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರೊ. ರಾಜೀವ್‌ ಗೌಡ 1.29 ಲಕ್ಷ ಮತಗಳನ್ನಷ್ಟೆ ಪಡೆದಿದ್ದಾರೆ.

ಇದೇ ವೇಳೆ ಶೋಭಾ ಕರಂದ್ಲಾಜೆ ಅವರು 1.64 ಲಕ್ಷ ಮತ ಗಳಿಸಿದ್ದಾರೆ. ಅಂದರೆ ರಾಜೀವ್‌ ಗೌಡ ಅವರಿಗಿಂತ 35 ಸಾವಿರ ಹೆಚ್ಚು ಮತ ಇಲ್ಲಿ ಶೋಭಾ ಅವರಿಗೆ ಸಿಕ್ಕಿದೆ. ಇನ್ನು ಹೆಬ್ಟಾಳದಲ್ಲಿ ಬಿಜೆಪಿಗಿಂತ ಹೆಚ್ಚು ಮತ ಪಡೆಯಲು ಕಾಂಗ್ರೆಸ್‌ ಯಶಸ್ವಿ ಆಗಿದ್ದರೂ ಸಹ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್‌ನ ಮತ ಪ್ರಮಾಣ ಕಡಿಮೆಯಿದೆ. ಬೈರತಿ ಸುರೇಶ್‌ ತಾವು ವಿಧಾನಸಭಾ ಚುನಾವಣೆಗೆ ನಿಂತಾಗ 91,838 ಮತ ಪಡೆದಿದ್ದರು. ಆಗ ಬಿಜೆಪಿ 61,084 ಮತಗಳನ್ನಷ್ಟೆ ಪಡೆದು ಸೋತಿತ್ತು. ಆದರೆ ಲೋಕಸಭೆಯಲ್ಲಿ ಕಾಂಗ್ರೆಸ್‌ ಇಲ್ಲಿ 79,842 ಮತಗಳನ್ನು ಪಡೆದಿದ್ದರೆ ಬಿಜೆಪಿ 77,680 ಮತಗಳಿಗೆ ಸೀಮಿತವಾಗಿದೆ.

ಬೈರತಿ ಸುರೇಶ್‌ ತಾವು ಪಡೆದಷ್ಟು ಮತಗಳನ್ನು ಅಥವಾ ಅದಕ್ಕಿಂತ ಹೆಚ್ಚು ಮತಗಳನ್ನು ತಮ್ಮ ಪಕ್ಷದ ಅಭ್ಯರ್ಥಿಗೆ ವರ್ಗಾಯಿಸಲು ವಿಫ‌ಲರಾಗಿದ್ದಾರೆ. ರಾಜೀವ್‌ಗೌಡರಿಗೆ ಸುರೇಶ್‌ ಪಡೆದುದಕ್ಕಿಂತ ಸುಮಾರು 11 ಸಾವಿರ ಮತ ಕಡಿಮೆ ಗಳಿಸಿದ್ದರೆ ಅದೇ ಬಿಜೆಪಿ ಬರೋಬ್ಬರಿ 27 ಸಾವಿರ ಹೆಚ್ಚು ಮತಗಳನ್ನು ಪಡೆದುಕೊಂಡಿದೆ. ಇನ್ನು ಯಶವಂತಪುರದ ಕಥೆ ವಿಭಿನ್ನವಾದದ್ದು. ಇಲ್ಲಿ ಬಿಜೆಪಿ ಶಾಸಕ ಸೋಮಶೇಖರ್‌ ಅವರ ಕೈಗಳು ಕಾಂಗ್ರೆಸ್‌ ನಾಯಕರ ಭುಜದ ಮೇಲಿದೆ. ಕಾಂಗ್ರೆಸ್‌ಗೆ ತಮ್ಮ ಬೆಂಬಲ ಎಂಬುದನ್ನು ಬಹಿರಂಗ ಪಡಿಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಬರೋಬ್ಬರಿ 2.30 ಲಕ್ಷ ಮತ ಪಡೆದಿದ್ದರೆ ಕಾಂಗ್ರೆಸ್‌ನ ರಾಜೀವ್‌ ಗೌಡ ಪಡೆ ದಿರುವುದು 1.16 ಲಕ್ಷ ಮತಗಳು. ಅಂದರೆ ಬಿಜೆಪಿ ಕಾಂಗ್ರೆಸ್‌ಗಿಂತ ಈ ಕ್ಷೇತ್ರದಲ್ಲಿ ಬರೋಬ್ಬರಿ 1.14 ಲಕ್ಷ ಮತಗಳನ್ನು ಅಧಿಕವಾಗಿ ಪಡೆದಿದೆ.

Advertisement

2023ರ ವಿಧಾನ ಸಭಾ ಚುನಾವಣೆಯಲ್ಲಿ ಸೋಮಶೇಖರ್‌ 1.68 ಲಕ್ಷ ಮತ ಪಡೆದಿದ್ದರು. ಜೆಡಿಎಸ್‌ನ ಜವರಾಯಿ ಗೌಡ 1.54 ಲಕ್ಷ ಮತಗಳನ್ನು ಪಡೆದಿದ್ದರು. ಇನು °ಪುಲಕೇಶಿ ನಗರದಲ್ಲಿ ಕಾಂಗ್ರೆಸ್‌ ಭರ್ಜರಿ ಮತ ಕೊಯ್ಲು ಮಾಡಿದೆ. ಅಲ್ಲಿ ಕಾಂಗ್ರೆಸ್‌ 1.16 ಲಕ್ಷ ಮತ ಪಡೆದಿದ್ದರೆ ಬಿಜೆಪಿ ಬರೀ 28,269 ಮತಗಳನ್ನಷ್ಟೆ ಪಡೆದು ಭಾರಿ ಹಿನ್ನಡೆ ಅನುಭವಿಸಿದೆ. ಆದರೆ ಈ ಕ್ಷೇತದಲ್ಲಿ ವಿಧಾನ ಸಭೆ ಚುನಾವಣೆಗೆ ಹೋಲಿಸಿದರೆ ಎರಡೂ ಪಕ್ಷಗಳು ತಮ್ಮ ಮತಗಳನ್ನು ವೃದ್ಧಿಸಿಕೊಂಡಿವೆ. ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 87 ಸಾವಿರ ಮತ ಪಡೆದಿದ್ದರೆ ಲೋಕಸಭೆ ಹೆಚ್ಚುವರಿಯಾಗಿ 29 ಸಾವಿರ ಮತ ಗಳಿಸಿದೆ.

ಇನ್ನು ವಿಧಾನ ಸಭೆಯಲ್ಲಿ 10 ಸಾವಿರ ಮತ ಪಡೆದಿದ್ದ ಬಿಜೆಪಿ 18 ಸಾವಿರ ಅಧಿಕ ಮತ ಪಡೆದಿದೆ. ಬಿಜೆಪಿಯ ಶಾಸಕರಾದ ಕೆ. ಆರ್‌. ಪುರದ ಬೈರತಿ ಬಸವರಾಜ್‌ 9 ಸಾವಿರ, ಮಹಾಲಕ್ಷ್ಮೀ ಲೇ ಔಟ್‌ನ ಗೋಪಾಲಯ್ಯ 8 ಸಾವಿರ, ಮಲ್ಲೇಶ್ವರನ ಡಾ. ಸಿ. ಎನ್‌. ಅಶ್ವತ್ಥನಾರಾಯಣ 4 ಸಾವಿರ ಮತಗಳನ್ನು ತಮ್ಮ ಚುನಾವಣೆಗಿಂತ ಹೆಚ್ಚುವರಿಯಾಗಿ ಬಿಜೆಪಿಗೆ ವರ್ಗಾಯಿಸುವಲ್ಲಿ ಯಶಸ್ವಿ ಆಗಿದ್ದಾರೆ.

  ರಾಕೇಶ್‌ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next