ಬೆಂಗಳೂರು: ತೀವ್ರ ಕುತೂಹಲ ಮೂಡಿಸಿರುವ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯಿಂದ ಮಾಜಿ ಸಚಿವರಾದ ಆರ್. ಶಂಕರ್, ಎಂ.ಟಿ.ಬಿ. ನಾಗರಾಜ್, ಮಾಜಿ ಶಾಸಕರಾದ ಸುನಿಲ್ ವಲ್ಯಾಪುರೆ, ನಿರ್ಮಲ್ ಕುಮಾರ್ ಸುರಾನ ಸಹಿತ 10 ಸಂಭಾವ್ಯರ ಪಟ್ಟಿಯನ್ನು ಅಂತಿಮ ಗೊಳಿಸಲಾಗಿದೆ.
ಮೇಲ್ಕಂಡ ನಾಲ್ಕು ಸಂಭಾವ್ಯರ ಜತೆಗೆ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್, ಮಾಜಿ ಶಾಸಕರಾದ ಮುನಿರತ್ನ, ಭಾರತಿ ಶೆಟ್ಟಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಪ್ರತಾಪ್ ಸಿಂಹ ನಾಯಕ್, ಗೋಪಿನಾಥ ರೆಡ್ಡಿ ಅವರ ಹೆಸರನ್ನೂ ಉಲ್ಲೇಖೀಸಿರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ವಿಧಾನ ಪರಿಷತ್‌ನ ಏಳು ಸ್ಥಾನಗಳಲ್ಲಿ ಬಿಜೆಪಿ ನಾಲ್ಕು ಸ್ಥಾನ ಗೆಲ್ಲಲು ಅವಕಾಶವಿದ್ದು, ಸುಮಾರು 123 ಮಂದಿ ಆಕಾಂಕ್ಷಿಗಳಿದ್ದರು. ಎಲ್ಲ ಆಕಾಂಕ್ಷಿಗಳ ಹೆಸರು ಪ್ರಸ್ತಾವಿಸಿ ಚರ್ಚಿಸಲಾಯಿತು. ಈ ವೇಳೆ ಆರ್. ಶಂಕರ್, ಎಂ.ಟಿ.ಬಿ. ನಾಗರಾಜ್, ಮಾಜಿ ಶಾಸಕ ಸುನಿಲ್ ವಲ್ಯಾಪುರೆ, ಸಿ.ಪಿ. ಯೋಗೇಶ್ವರ್, ಕಾಂಗ್ರೆಸ್ ತೊರೆದ ಮುನಿರತ್ನ, ಸಂಘಟನೆ ಹಿನ್ನೆಲೆಯ ಮಹೇಶ್ ಟೆಂಗಿನಕಾಯಿ, ಭಾರತಿ ಶೆಟ್ಟಿ, ಪ್ರತಾಪ ಸಿಂಹ ನಾಯಕ್, ಗೋಪಿನಾಥ ರೆಡ್ಡಿ ಅವರ ಹೆಸರನ್ನೂ ಚರ್ಚಿಸಲಾಗಿದೆ.ರಾಜ್ಯ ಬಿಜೆಪಿ ಕೋರ್ ಕಮಿಟಿಯಲ್ಲಿ 10 ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಕೇಂದ್ರ ಚುನಾವಣ ಸಮಿತಿಗೆ ಶಿಫಾರಸು ಮಾಡಲು ನಿರ್ಧಾರವಾಗಿದೆ.
ದೇವೇಗೌಡರ ನಿರ್ಧಾರ
ಒಂದು ಸ್ಥಾನ ಗೆಲ್ಲುವ ಅವಕಾಶ ಇರುವ ಜೆಡಿಎಸ್ ಸೋಮವಾರ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದು, ಅಭ್ಯರ್ಥಿ ಆಯ್ಕೆಯ ಅಧಿಕಾರವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರಿಗೆ ನೀಡಲಾಗಿದೆ.
ಸಭೆಯಲ್ಲಿ ಹಲವು ಹೆಸರುಗಳು ಚರ್ಚೆಯಾಗಿವೆ. ಅಂತಿಮವಾಗಿ ದೇವೇಗೌಡರ ತೀರ್ಮಾನಕ್ಕೆ ಬಿಡ ಲಾಗಿದೆ. ಜೂ.17ರಂದು ಅಭ್ಯರ್ಥಿ ಘೋಷಣೆ ಆಗಬಹುದೆಂದು ಬಂಡೆಪ್ಪ ಕಾಶೆಂಪೂರ್ ಹೇಳಿದರು. ಜೆಡಿಎಸ್‌ನಲ್ಲಿ 30ರಿಂದ 35 ಆಕಾಂಕ್ಷಿಗಳಿದ್ದಾರೆ.
ಕಾಂಗ್ರೆಸ್‌ನಲ್ಲೂ ಕಗ್ಗಂಟು
ಕಾಂಗ್ರೆಸ್‌ನಲ್ಲೂ 2 ಸ್ಥಾನಗಳಿಗಾಗಿ 2 ಡಜನ್‌ಗೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಆದರೆ ಅಭ್ಯರ್ಥಿಗಳ ಆಯ್ಕೆಗೆ ಅಧಿಕೃತ ಸಭೆ ನಡೆದಿಲ್ಲ. ರಾಜ್ಯಸಭೆ ಚುನಾವಣೆಯಂತೆ ಪರಿಷತ್‌ಗೂ ದೂರವಾಣಿ ಮೂಲಕವೇ ರಾಜ್ಯ ನಾಯಕರ ಅಭಿಪ್ರಾಯ ಪಡೆದು ಘೋಷಿಸಬಹುದು. ಡಿ.ಕೆ. ಶಿ., ಸಿದ್ದರಾಮಯ್ಯ, ಖರ್ಗೆ ಜತೆ ಚರ್ಚಿಸಿದ ಬಳಿಕ ಅಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್‌ಗೆ ಮಂಗಳವಾರ ಕಳುಹಿಸುವ ಸಾಧ್ಯತೆ ಇದೆ.