ನವದೆಹಲಿ: ಪ್ರವಾದಿ ಮುಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ಭಾರತೀಯ ಜನತಾ ಪಕ್ಷದಿಂದ ಅಮಾನತುಗೊಂಡಿದ್ದ ಮಾಜಿ ವಕ್ತಾರೆ ನೂಪುರ್ ಶರ್ಮಾ ಮತ್ತು ಆಕೆಯ ಕುಟುಂಬಕ್ಕೆ ಜೀವ ಬೆದರಿಕೆ ಬಂದಿರುವುದಾಗಿ ದೂರು ದಾಖಲಾದ ನಂತರ ದೆಹಲಿ ಪೊಲೀಸರು ಭದ್ರತೆಯನ್ನು ಒದಗಿಸಿರುವುದಾಗಿ ಅಧಿಕಾರಿಗಳು ಮಂಗಳವಾರ (ಜೂನ್ 07) ತಿಳಿಸಿದ್ದಾರೆ.
ಇದನ್ನೂ ಓದಿ:ನಿಮಗೆ ನಾಚಿಕೆ ಅಗೋದಿಲ್ವಾ?: ಆರ್ ಎಸ್ಎಸ್ ಮುಖಂಡರ ವಿರುದ್ಧ ವಿಶ್ವನಾಥ್ ಆಕ್ರೋಶ
ತಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದು, ಈ ಹಿನ್ನೆಲೆಯಲ್ಲಿ ತನಗೆ ಹಾಗೂ ಕುಟುಂಬಕ್ಕೆ ಭದ್ರತೆ ಒದಗಿಸಬೇಕೆಂದು ನೂಪುರ್ ಶರ್ಮಾ ಮನವಿ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.
ಈ ನಿಟ್ಟಿನಲ್ಲಿ ನೂಪುರ್ ಹಾಗೂ ಆಕೆಯ ಕುಟುಂಬಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾದಿ ಕುರಿತು ನೀಡಿರುವ ಹೇಳಿಕೆಗೆ ಇಸ್ಲಾಮಿಕ್ ರಾಷ್ಟ್ರಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ ನಂತರ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಮತ್ತು ದೆಹಲಿ ಬಿಜೆಪಿ ಘಟಕದ ಮಾಧ್ಯಮ ವಕ್ತಾರ ನವೀನ್ ಕುಮಾರ್ ಜಿಂದಾಲ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.
ಮುಸ್ಲಿಮ್ ಸಂಘಟನೆಗಳು ಹಾಗೂ ಕುವೈಟ್, ಇರಾನ್, ಕತಾರ್ ಈ ಹೇಳಿಕೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ ನಂತರ ಭಾರತೀಯ ಜನತಾ ಪಕ್ಷ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿ, ಭಾರತದಲ್ಲಿ ಎಲ್ಲಾ ಧರ್ಮವನ್ನು ಗೌರವಿಸಲಾಗುತ್ತಿದೆ. ಯಾವುದೇ ಧಾರ್ಮಿಕ ವ್ಯಕ್ತಿಯನ್ನು ಅಥವಾ ಧರ್ಮವನ್ನು ಅವಮಾನಗೊಳಿಸುವುದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿತ್ತು.