ಕುಂದಾಪುರ: ಕುಂದಾಪುರ ಗಂಗೊಳ್ಳಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಪ್ರಯತ್ನ ಮಾಡಲಾಗುವುದು. ಕುಂದಾಪುರ ರಿಂಗ್ ರಸ್ತೆ ಸಂಪೂರ್ಣಗೊಳಿಸುವುದು ನಮ್ಮ ಆದ್ಯತೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉನ್ನತ ದರ್ಜೆಗೇರಿಸಲು ಪ್ರಯತ್ನ ಮಾಡಲಾಗುವುದು. ವಿದ್ಯಾವಂತ ಯುವಕ ಯುವತಿಯರಿಗೆ ಉದ್ಯೋಗದ ಅವಕಾಶಕ್ಕಾಗಿ ವಿಶೇಷ ಕೈಗಾರಿಕಾ ವಲಯದ ಸ್ಥಾಪನೆಗೆ ಪ್ರಯತ್ನಿಸಲಾಗುವುದು. ಗ್ರಾಮದ ಎಲ್ಲಾ ಮನೆಗಳಿಗೂ ಶುದ್ಧ ಕುಡಿಯುವ ನೀರಿನ ಯೋಜನೆಯ ಸಂಪೂರ್ಣ ಅನುಷ್ಠಾನಕ್ಕೆ ಪ್ರಯತ್ನ ಮಾಡುವ ಜತೆಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಎಲ್ಲಾ ಅರ್ಹ ಫಲಾನುಭವಿಗಳಿಗೆ ದೊರಕಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಅವರು ಮೇ 4 ಹಾಗೂ ಮೇ 5ರಂದು ವಿವಿಧೆಡೆ ಚುನಾವಣ ಪ್ರಚಾರ ನಡೆಸಿ ಮತಯಾಚಿಸಿದರು. ಮೇ 4ರಂದು ಬಾರ್ಕೂರು, ಹನೆಹಳ್ಳಿ, ಕೋಟತಟ್ಟು ಮೊದಲಾದೆಡೆ ಮತಯಾಚನೆ ನಡೆಸಿದರು.
ಬಾರ್ಕೂರು ಹನೆಹಳ್ಳಿಯಲ್ಲಿ ಶೆಟ್ಟಿಗಾರ್ ಇಂಡಸ್ಟ್ರೀಸ್‌ನಲ್ಲಿ ಮಾಲಕ ಶ್ರೀನಿವಾಸ್ ಶೆಟ್ಟಿಗಾರ್, ಬಾಕೂìರು ಶಾಂತಾರಾಮ ಶೆಟ್ಟಿ, ಹನೆಹಳ್ಳಿ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಸದಸ್ಯರು, ಬಿಲ್ಲಾಡಿ ಪೃಥ್ವಿರಾಜ ಶೆಟ್ಟಿ, ದೇವದಾಸ ಹೊಸ್ಕೆರೆ ಮೊದಲಾದವರು ಇದ್ದರು. ಬಾರ್ಕೂರು ಪೇಟೆಯಲ್ಲಿ ವಕೀಲ ಹರಿಮಕ್ಕಿ ರತ್ನಾಕರ ಶೆಟ್ಟಿ, ಕಾಡೂರು ಸುರೇಶ್ ಶೆಟ್ಟಿ, ಬಾರ್ಕೂರು ಪಂಚಾಯತ್ ಸದಸ್ಯರು ಇದ್ದರು. ಪೇಟೆಯಲ್ಲಿ ವಿವಿಧೆಡೆ ಪ್ರಚಾರ ನಡೆಸಿ ಮತ ಯಾಚಿಸಲಾಯಿತು.
ಕೋಟ ಪಡುಕೆರೆ ವ್ಯಾಪ್ತಿಯಲ್ಲಿ 7 ಫಿಶ್ ಕಟಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಲಾಯಿತು. ಪಟ್ಟಣ ಪಂಚಾಯತ್ ಸದಸ್ಯ ರಾಜು ಪೂಜಾರಿ ಕಾರ್ಕಡ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಕುಂದರ್, ಕೋಟ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ನ್ಯಾಯವಾದಿ, ಕೋಟತಟ್ಟು ಮಾಜಿ ಅಧ್ಯಕ್ಷ ಪ್ರಮೋದ್ ಹಂದೆ, ಸತೀಶ್ ಬಾರಿಕೆರೆ ಮತ್ತಿತರರು ಇದ್ದರು. ಸಾಸ್ತಾನ ಪೇಟೆಯಲ್ಲಿ ನಡೆದ ಮತಯಾಚನೆ ಸಂದರ್ಭ ಪಾಂಡೇಶ್ವರ ಪಂಚಾಯತ್ ಮಾಜಿ ಅಧ್ಯಕ್ಷ ಗೋವಿಂದ ಪೂಜಾರಿ , ಸುರೇಶ್ ಪೂಜಾರಿ ಮೊದಲಾದವರು ಇದ್ದರು.
ಶುಕ್ರವಾರ ವಿವಿಧೆಡೆ ಪ್ರಚಾರ ನಡೆಯಿತು. ಬಸ್ರೂರಿನಲ್ಲಿ, ಹುಣ್ಸೆಮಕ್ಕಿಯ ಪೇಟೆಯಲ್ಲಿ ಮತಯಾಚನೆ ನಡೆದು ಜಪ್ತಿ ಹಾಗೂ ಹುಣ್ಸೆಮಕ್ಕಿಯಲ್ಲಿ ಕ್ಯಾಶ್ಯೂ ಫ್ಯಾಕ್ಟರಿಗೆ ಭೇಟಿ ನೀಡಲಾಯಿತು. ಅಮಾಸೆಬೈಲು, ಹಾಲಾಡಿ, ಬಿದ್ಕಲ್‌ಕಟ್ಟೆ ಪೇಟೆಯಲ್ಲಿ ಪ್ರಚಾರ ನಡೆಯಿತು.
ಬಿಜೆಪಿ ಅಧ್ಯಕ್ಷ ಶಂಕರ ಅಂಕದಕಟ್ಟೆ ಮಾತನಾಡಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾರ್ಗದರ್ಶನ, ಕಾರ್ಯಕರ್ತರ ಅಹೋರಾತ್ರಿ ಪರಿಶ್ರಮಕ್ಕೆ ಅಭ್ಯರ್ಥಿಯನ್ನು ಗೆಲ್ಲಿಸುವ ಶಕ್ತಿಯಿದೆ, ಕ್ಷೇತ್ರಾದ್ಯಂತ ಬಿಜೆಪಿ ಬಿರುಗಾಳಿ ಬಲವಾಗಿ ಬೀಸಲಾರಂಭಿಸಿದೆ ಎಂದರು.
ಕಳೆದ 25 ವರ್ಷಗಳಿಂದ ಕುಂದಾಪುರ ಕ್ಷೇತ್ರದಲ್ಲಿ ಶಾಂತಿ ಸೌಹಾರ್ದತೆ ಇದ್ದು, ಎಲ್ಲ ವರ್ಗ, ಧರ್ಮದವರು ಬಿಜೆಪಿ ಜತೆ ಇದ್ದಾರೆ. ಸಭೆ, ಪಾದಯಾತ್ರೆ ಸಮಯ ಸೇರಿದ ಜನಸ್ತೋಮ, ಸಿಕ್ಕ ಬೆಂಬಲ ಇದಕ್ಕೆ ಸಾಕ್ಷಿ ಎಂದರು. ಇದುವರೆಗೆ ಕ್ಷೇತ್ರದ ಪ್ರತೀಗ್ರಾಮಗಳಿಗೂ ಭೇಟಿ ನೀಡಿದ್ದು, 42 ಕಡೆಗಳಲ್ಲಿ ಸಭೆ ನಡೆಸಿ ಮತಯಾಚನೆ ಮಾಡಲಾಗಿದೆ. ಸೇರಿದ ಜನಸ್ತೋಮ ನೋಡಿದರೆ ಈ ಬಾರಿಯೂ ಬಿಜೆಪಿ ಎಂಬಂತೆ ಇತ್ತು. ಇಡೀ ಚುನಾವಣೆ ಚುಕ್ಕಾಣಿ ಹಿಡಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ನಿಷ್ಕಳಂಕ ವ್ಯಕ್ತಿತ್ವ ಸರಳ ಹಾಗೂ ಮತದಾರರ ಪ್ರೀತಿಗೆ ಕಾರಣವಾಗಿದ್ದು, ಈ ಎಲ್ಲ ಬೆಳವಣಿಗೆ ಸಜ್ಜನ, ಪ್ರಾಮಾಣಿಕ ವ್ಯಕ್ತಿ ಕಿರಣ್ ಕುಮಾರ್ ಕೊಡ್ಗಿ ವ್ಯಕ್ತಿತ್ವ ಚುನಾವಣೆಯಲ್ಲಿ ಮತವಾಗಿ ಪರಿವರ್ತನೆ ಆಗಲಿದೆ ಎಂದರು.