ಬೆಂಗಳೂರು: ಬಿಜೆಪಿ ನಾಯಕರು ಸೋಲಿನ ಭೀತಿಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇವರ ವಿರುದ್ಧ ಚುನಾವಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಸಿ.ಟಿ.ರವಿಗೆ ಮೋದಿ ಬಗ್ಗೆ ಅಭಿಮಾನವಿದ್ದರೆ ಇಟ್ಟುಕೊಳ್ಳಲಿ. ನಮ್ಮ ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಅವಕಾಶ ಇದೆ. ಆದರೆ, ಸಿ.ಟಿ.ರವಿಯವರ ಹೇಳಿಕೆ ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ಚುನಾವಣಾ ಆಯೋಗವು ಬಿಜೆಪಿ ನಾಯಕರ ಅವಹೇಳನಕಾರಿ ಹೇಳಿಕೆ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬೇಕು. ಸಿ.ಟಿ.ರವಿ ಹಾಗೂ ಚಿತ್ರದುರ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರ ವಿರುದ್ದ ಸೂಕ್ತ ತನಿಖೆ ನಡೆಸಬೇಕು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಕೂಡ ಅವಹೇಳನಕಾರಿ ಮಾತುಗಳನ್ನು ಆಡಲಾಗುತ್ತಿದೆ.
ಎಲ್ಲ ವಿಚಾರಗಳನ್ನು ಚುನಾವಣಾ ಆಯೋಗಕ್ಕೆ ದೂರಿನ ರೂಪದಲ್ಲಿ ನೀಡಿದ್ದೇವೆ. ವೈಯಕ್ತಿಕ ಟೀಕೆ ಮಾಡುತ್ತಿರುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ. ಇದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು, ಚುನಾವಣಾ ಆಯೋಗ ಕೂಡ ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಕಪ್ಪು ಪೆಟ್ಟಿಗೆ ತನಿಖೆಗೆ ಆಗ್ರಹ: ಇದೇ ವೇಳೆ, ಚಿತ್ರದುರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ತಂದಿದ್ದ ಕಪ್ಪು ಬಾಕ್ಸ್ ಕುರಿತು ತನಿಖೆ ಆಗಬೇಕು. ಪ್ರಧಾನಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಂದಿರುವ ಕಪ್ಪು ಪೆಟ್ಟಿಗೆಯ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಹಿಂದೆ ಅಸ್ಸಾಂನಲ್ಲಿ ಪ್ರಧಾನಿ ಅಲ್ಲಿನ ಮುಖ್ಯಮಂತ್ರಿಯೊಂದಿಗೆ ಪ್ರಯಾಣ ಮಾಡುತ್ತಿದ್ದಾಗ, ಅಸ್ಸಾಂ ಮುಖ್ಯಮಂತ್ರಿಯ ಬೆಂಗಾವಲು ಪಡೆ ವಾಹನದಲ್ಲಿ 1.8 ಕೋಟಿ ರೂಪಾಯಿ ಹಣ ಜಪ್ತಿ ಮಾಡಲಾಗಿತ್ತು.
ಈಗ ಚಿತ್ರದುರ್ಗದ ಸಮಾವೇಶಕ್ಕೆ ಆಗಮಿಸಿದ ಸಂದರ್ಭದಲ್ಲಿಯೂ ಮೋದಿ ಅದೇ ರೀತಿಯ ಬಾಕ್ಸ್ ತಂದಿದ್ದಾರೆ. ಅದರಲ್ಲೂ ಹಣ ತಂದಿರಬಹುದು ಎಂಬ ಅನುಮಾನವಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಮೋದಿ ತಂದಿದ್ದ ಕಪ್ಪು ಬಾಕ್ಸ್‌ನಲ್ಲಿ ಟೆಲಿಪ್ರಿಂಟರ್ ಇತ್ತು ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಇದನ್ನು ಹೇಗೆ ನಂಬಲು ಸಾಧ್ಯ? ಈ ಬಗ್ಗೆ ಪ್ರಾಮಾಣಿಕವಾಗಿ ತನಿಖೆಯಾಗಲಿ ಎಂದು ಆಗ್ರಹಿಸಿದರು.