ಕಣ್ಣೂರು : ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಪುನಃ ಇನ್ನೊಂದು ರಾಜಕೀಯ ಹಿಂಸೆಯ ಘಟನೆ ವರದಿಯಾಗಿದೆ. ಬಿಜೆಪಿಯ ಕಣ್ಣೂರು ಮಂಡಲದ ಉಪಾಧ್ಯಕ್ಷ ಸುಶೀಲ್ ಎಂಬವರ ಮೇಲೆ ಬುಧವಾರ ರಾತ್ರಿ ಓಲಶೆರಿ ಕಾವು ಎಂಬಲ್ಲಿ ಗಂಭೀರ ಹಲ್ಲೆ ನಡೆಸಲಾಗಿದೆ.
ಸುಶೀಲ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ; ಅವರ ದೇಹಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕೇರಳದ ಕಣ್ಣೂರು ಜಿಲ್ಲೆಯು ರಾಜಕೀಯ ಕೊಲೆಗಳಿಗೆ ಕುಖ್ಯಾತವಾಗಿದೆ. ಇಲ್ಲಿ ಆಗೀಗ ಎಂಬಂತೆ ನಡೆಯುತ್ತಿರುವ ಬಿಜೆಪಿ – ಸಿಪಿಎಂ ಸಂಘರ್ಷಕ್ಕೆ ಉಭಯ ಪಕ್ಷಗಳ ಹಲವು ಕಾರ್ಯಕರ್ತರು ಬಲಿಯಾಗಿದ್ದಾರೆ.
ಕಣ್ಣೂರು ಮಂಡಲ ಉಪಾಧ್ಯಕ್ಷ ಸುಶೀಲ್ ಅವರ ಮೇಲಿನ ಹಲ್ಲೆಗೆ ಬಿಜೆಪಿಯು ಸಿಪಿಎಂ ಕಾರಣವೆಂದು ಆರೋಪಿಸಿದೆ. ಈ ಆರೋಪವನ್ನು ತಿರಸ್ಕರಿಸಿರುವ ಸಿಪಿಎಂ, “ಇದು ಬಿಜೆಪಿಯೊಳಗಿನ ಕಲಹ – ವೈಷಮ್ಯದ ಫಲವಾಗಿ ನಡೆದಿರುವ ಹಿಂಸೆಯಾಗಿದೆ’ ಎಂದು ಹೇಳಿದೆ.
2016ರ ಮೇ ತಿಂಗಳಲ್ಲಿ ನಡೆದಿದ್ದ ಕೇರಳ ವಿಧಾನಸಭಾ ಚುನಾವಣೆಗಳಲ್ಲಿ ಎಲ್‌ಡಿಎಫ್ ನೇತೃತ್ವದ ಸಿಪಿಐ ಎಂ ಅಧಿಕಾರಕ್ಕೆ ಮರಳಿತ್ತು. ಆರ್‌ಎಸ್‌ಎಸ್ ಕಣ್ಣೂರು ಜಿಲ್ಲೆಯಲ್ಲಿ ಉದ್ದೇಶಪೂರ್ವಕವಾಗಿ ಅಶಾಂತಿಯನ್ನು ಸೃಷ್ಟಿಸುತ್ತಿದೆ ಎಂದು ವಿಜಯನ್ ಆರೋಪಿಸಿದ್ದಾರೆ.