Advertisement

ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಿರುವುದು ಬಿಜೆಪಿ ಹಿಡನ್ ಅಜೆಂಡಾ : ಸತೀಶ ಜಾರಕಿಹೊಳಿ

05:17 PM Mar 24, 2022 | Team Udayavani |

ಬೆಳಗಾವಿ: ಹಿಂದೂ ದೇವಸ್ಥಾನಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ಹೇರಿರುವುದು ಬಿಜೆಪಿ ಹಿಡನ್ ಅಜೆಂಡಾ ಆಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದ್ದಾರೆ.

Advertisement

ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಜಾತ್ಯಾತೀತ ದೇಶ. ವಿವಿಧ ಜಾತಿ, ಧರ್ಮ ಕೂಡಿದ ದೇಶ. ಎಲ್ಲರೊಂದಿಗೂ ಸಂಬಂಧ ಇರುತ್ತದೆ. ಹೀಗಿರುವಾಗ ಮುಸ್ಲಿಮರಿಗೆ ವ್ಯಾಪಾರ ನಿರ್ಬಂಧಿಸುವುದು ಅಸಾಧ್ಯ. ಎಲ್ಲ ಸಮುದಾಯಗಳು ಒಂದಾಗಿ ಬಾಳುವ ಇತಿಹಾಸ ಮೊದಲಿನಿಂದಲೂ ಇದೆ ಎಂದರು.

ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ವಿವಾದ ಸೃಷ್ಟಿಸುವಂತಹ ಸೂಕ್ಷ್ಮ ವಿಚಾರಗಳನ್ನೇ ತನ್ನ ಅಸ್ತ್ರವನ್ನಾಗಿಸಿದೆ. ಹಿಜಾಬ್, ಕೇಸರಿ ಶಾಲು, ಶಿವಮೊಗ್ಗ ಹರ್ಷ ಹತ್ಯೆ ಪ್ರಕರಣದ ಬಳಿಕ ಕಾಶ್ಮೀರ ಫೈಲ್ಸ್ ಚಿತ್ರ ಆಯ್ಕೆ ಮಾಡಿಕೊಂಡಿದೆ. ಇದು ಕೂಡ ಚುನಾವಣಾ ಪ್ರಚಾರದ ಒಂದು ಭಾಗವಾಗಿದೆ. ಹೀಗೆ ಒಂದಿಲ್ಲೊಂದು ವಿವಾದಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.

ಮುಂದಿನ ಆರು ತಿಂಗಳಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದೆ. ಅದರ ಜೊತೆಗೆ ಕರ್ನಾಟಕ ವಿಧಾನಸಭೆ ಚುನಾವಣೆಯೂ ನಡೆಯುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಬಿಜೆಪಿ ಸಮೀಕ್ಷೆ ಕೈಗೊಂಡಿದ್ದು ವಿಧಾನಸಭೆ ಚುನಾವಣೆ ಎದುರಿಸಲು ಕಾಂಗ್ರೆಸ್ ಸರ್ವ ಸನ್ನದ್ಧವಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಹರ್ಷ ಕೊಲೆ ಪ್ರಕರಣ ಎನ್ಐಎಗೆ ವಹಿಸುವ ಬಗ್ಗೆ ಚಿಂತನೆ ಇದೆ : ಆರಗ ಜ್ಞಾನೇಂದ್ರ

Advertisement

ವಾಯವ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಗೆ ಈ ತಿಂಗಳಾಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು. ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದಿಂದ ತಲಾ ಮೂವರು ಅಭ್ಯರ್ಥಿಗಳು ಆಕಾಂಕ್ಷಿಗಳಿದ್ದಾರೆ. ಈ ಎರಡೂ ಕ್ಷೇತ್ರದಿಂದ ಬೆಳಗಾವಿ ಜಿಲ್ಲೆಯಿಂದಲೇ ಅಭ್ಯರ್ಥಿ ಆಯ್ಕೆಮಾಡುವ ಕುರಿತು ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಎಂದು ಹೇಳಿದರು.

ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಆರು ತಿಂಗಳಾಗಿದೆ ಆದರೆ, ಇನ್ನೂ ಮೇಯರ್, ಉಪಮೇಯರ್ ಚುನಾವಣೆ ನಡೆಯುತ್ತಿಲ್ಲ. ಆಡಳಿತಾಧಿಕಾರಿಯೇ ಬಜೆಟ್ ಮಂಡಿಸಿದ್ದಾರೆ. ಬಿಜೆಪಿ ಅಧಿಕಾರದಲ್ಲಿ ಎಲ್ಲವೂ ಅರ್ಧ. ಮನಬಂದಂತೆ ಬಜೆಟ್ ಮಂಡನೆ ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next