ಬೆಂಗಳೂರು: “ಡಬಲ್ ಎಂಜಿನ್ ಸರ್ಕಾರ”ದ ಜಪದಲ್ಲಿ ವಾಸ್ತವ ಮರೆತು ಅಖಾಡಕ್ಕೆ ಇಳಿದ ಬಿಜೆಪಿಯ ಎಲ್ಲ ಪ್ರಯೋಗಗಳು ತಲೆಕೆಳಗಾಗಿದೆ. ಆಯಕಟ್ಟಿನ ಸ್ಥಳದಲ್ಲಿ ಕುಳಿತವರ ಹಠಮಾರಿತನ ಹಾಗೂ ಉಡಾಫೆ ವರ್ತನೆಗೆ ಪಕ್ಷ ಬೆಲೆತೆತ್ತಿದೆ. ನಾನೇ ಎಲ್ಲ, ನನ್ನಿಂದಲೇ ಎಲ್ಲ ಎಂದು ಮೆರೆದ “ಗಜಪತಿ”ಗಳ “ಗರ್ವ ಭಂಗ”ದೊಂದಿಗೆ ದಕ್ಷಿಣ ಭಾರತದಲ್ಲಿ ಬಿಜೆಪಿ ಭದ್ರ ನೆಲೆ ಛಿದ್ರವಾಗಿದೆ.
ಪಕ್ಷ ನಿಂತ ನೆಲೆ ಕುಸಿಯುತ್ತಿದೆ ಎಂಬ ಮುನ್ಸೂಚನೆಯನ್ನು ಕಾರ್ಯಕರ್ತರು ಮೇಲಿಂದ ಮೇಲೆ ರವಾನಿಸುತ್ತಿದ್ದರೂ ನಾಯಕರು ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಒಳಗೊಂಡಂತೆ ಸಂಪುಟದ ಯಾವೊಬ್ಬ ಸಚಿವರು ಸತ್ಯವನ್ನು ಸ್ವೀಕರಿಸುವ ಸ್ಥಿತಿಯಲ್ಲೇ ಇರಲಿಲ್ಲ. ವರ್ಷಕ್ಕೆ ಮುನ್ನವೇ ಬಂದು ಬೀಡು ಬಿಟ್ಟ ಖಾಸಗಿ ಸಂಸ್ಥೆಗಳು ಜನಾಭಿಪ್ರಾಯ ಸಂಗ್ರಹಿಸದೆ, ಮಾಡಿಕೊಟ್ಟ “ವೈಮಾನಿಕ ಸರ್ವೆ”ಗಳನ್ನೇ ಅತಿಯಾಗಿ ನಂಬಿದ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಇಷ್ಟು ತೀವ್ರವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಕೊನೆಯವರೆಗೂ ಸಾಧ್ಯವಾಗಲಿಲ್ಲ.
ಅತಿಯಾದ ಭ್ರಷ್ಟತೆ: ಶುಭ್ರತೆಯ ಸೋಗಿನಲ್ಲಿ ಬಿಜೆಪಿಯ ಪರಂಪರಾಗತ ಮತಬ್ಯಾಂಕ್ ಅಸಹ್ಯಪಡು ವಂತೆ ಭ್ರಷ್ಟಾಚಾರಕ್ಕೆ ಶರಣಾಗಿದ್ದು ಸೋಲಿನ ಹಿಂದಿರುವ ಬಹು ದೊಡ್ಡ ಕಾರಣ. ಈ ವಿಚಾರದಲ್ಲಿ ಬಿಜೆಪಿಯ ಉಡಾಫೆ ಯಾವ ಮಟ್ಟಿಗೆ ಇತ್ತೆಂದರೆ ತಪ್ಪನ್ನು ಸರಿ ಮಾಡಿಕೊಳ್ಳುವ ಬದಲು ” ಕಾಂಗ್ರೆಸ್ ಕಾಲದಲ್ಲಿ ಭ್ರಷ್ಟಾಚಾರ ನಡೆದಿಲ್ಲವೇ ” ಎಂದು ಪ್ರಶ್ನಿಸುವ ಹಂತ ತಲುಪಿತ್ತು. ಹೈಕಮಾಂಡ್ ತಪ್ಪಿತಸ್ಥರಿಗೆ ಶಿಕ್ಷೆ ನೀಡಬಹುದೆಂಬ ನಿರೀಕ್ಷೆ ಕೊನೆಗೂ ಹುಸಿಯಾಯಿತು.
ಯಡಿಯೂರಪ್ಪ ಫ್ಯಾಕ್ಟರ್: ಈ ಬಾರಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರರಷ್ಟೇ ಸತ್ಯ ಎಂದು ಮಾಜಿ ಸಿಎಂ ಯಡಿಯೂರಪ್ಪ ಮೇಲು ನೋಟಕ್ಕೆ ಹೇಳಿಕೆ ನೀಡಿದ್ದರು. ವಾಸ್ತವದಲ್ಲಿ ಅವರು ಎಷ್ಟು ಸಾಧ್ಯವೋ ಅಷ್ಟು ತಾಟಸ್ತ್ಯ ವಹಿಸುವ ಮೂಲಕ ವೀರಶೈವ -ಲಿಂಗಾಯತ ಸಮುದಾಯಕ್ಕೆ ತಲುಪಿಸಬೇಕಾದ ಸಂದೇಶ ರವಾನಿಸಿದ್ದರು. ತಮ್ಮ ಪುತ್ರನ ರಾಜಕೀಯ ಭವಿಷ್ಯ ಉಜ್ವಲವಾಗಬೇಕಿದ್ದರೆ ಈ ಬಾರಿ ಬಿಜೆಪಿ ಪ್ರತಿಪಕ್ಷ ಸಾಲಿನಲ್ಲಿ ಕುಳಿತುಕೊಳ್ಳುವುದೇ ಲೇಸೆಂಬ ಪಕ್ಕಾ ರಾಜಕೀಯವನ್ನು ಯಡಿಯೂರಪ್ಪ ಮೌನವಾಗಿಯೇ ನಡೆಸಿದರು.
ಫಲ ನೀಡದ ಪ್ರಯೋಗ : ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿ ನಡೆಸಿದ ಪ್ರಯೋಗವೇ ದೊಡ್ಡ ಟೀಕೆಯ ವಸ್ತುವಾಯಿತು. ಗೆಲ್ಲುವ ಕುದುರೆಗಳಾದ ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್, ಅರುಣ್ ಕುಮಾರ್ ಪುತ್ತಿಲರಂಥವರನ್ನು ಬದಿಗಿಟ್ಟು ಪೆಟ್ಟು ತಂದರು. ಹೊಸದಾಗಿ ಟಿಕೆಟ್ ಕೊಟ್ಟ 72 ಜನರ ಪೈಕಿ ಕೇವಲ 14 ಜನರು ಮಾತ್ರ ಗೆದ್ದರು.
ದುರ್ಬಲ ನಾಯಕತ್ವ: ಕಾಂಗ್ರೆಸ್‌ಗೆ ಹೋಲಿಸಿದರೆ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಕೊನೆಯವರೆಗೂ ದೊಡ್ಡ ನಿರ್ವಾತವಾಗಿಯೇ ಉಳಿಯಿತು. ಅಧಿಕಾರ ರಾಜಕಾರಣದಿಂದ ಯಡಿಯೂರಪ್ಪ ದೂರಾದ ಮೇಲೆ ಬೊಮ್ಮಾಯಿ ಅಧಿಕಾರ ಮಾತ್ರ ಅನುಭವಿಸಿದರೆ ವಿನಾ ಪಕ್ಷ ಹಾಗೂ ಸಮುದಾಯದ ಪ್ರಬಲ ನಾಯಕರಾಗಿ ಹೊರ ಹೊಮ್ಮಲೇ ಇಲ್ಲ.
ಸಡಿಲವಾದ ಸಂಘಟನೆ: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪಕ್ಷದ ಬೇರುಗಳನ್ನು ಬಲಪಡಿಸುತ್ತಾ ಸಾಗಿದರೆ, ಇನ್ನೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೆಲವೆಡೆ ಎಡವಿದರು. ಬಿಜೆಪಿಯ ಪ್ರಬಲ ಸಂಘಟನೆ, ಕಾರ್ಯಕರ್ತರು ತಟಸ್ಥರಾಗಿ ಉಳಿದರು. ಪ್ರಧಾನಿ ಮೋದಿ ಆಗಮನದವರೆಗೂ ಬಿಜೆಪಿಯ ಸಂಘಟನೆ ಗರಬಡಿದಂತೆ ಕುಳಿತರು.
ಮೀಸಲು ಹೋರಾಟ:ಪಂಚಮಸಾಲಿಗಳ ಮೀಸಲು ಹೋರಾಟವನ್ನು ಸೂಕ್ತ ಸಂದರ್ಭದಲ್ಲಿ ಇತ್ಯರ್ಥ ಪಡಿಸದೆ ಬಿಜೆಪಿ ಅನಗತ್ಯವಾಗಿ ಲಂಬಿಸಿತು. ಜತೆಗೆ ಪರಿಶಿಷ್ಟ ಜಾತಿ, ಪಂಗಡದ ಮೀಸಲು ಸೌಲಭ್ಯ ಹೆಚ್ಚಳದ ಬಗ್ಗೆ ಜನರ ಮನವೊಲಿಸುವ ಕೆಲಸದಲ್ಲೂ ಸೋತಿತು. ಹೀಗಾಗಿ ಎಲ್ಲ ಸಮುದಾಯದ ಬೇಸರವನ್ನು ಏಕಕಾಲಕ್ಕೆ ಎದುರಿಸಬೇಕಾಯಿತು.
~ ರಾಘವೇಂದ್ರ ಭಟ್