Advertisement
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ, ನಾವು 80 ಹಾಗೂ ಜೆಡಿಎಸ್ 37 ಸ್ಥಾನಗಳನ್ನು ಗೆದ್ದಿತ್ತು. ಶೇಕಡಾವಾರು ಮತಗಳನ್ನು ನೋಡಿದಾಗ ನಮ್ಮ ಪಕ್ಷ ಹೆಚ್ಚು ಮತ ಪಡೆದಿತ್ತು, ನಾವು 38.14% ಮತಗಳನ್ನು ಪಡೆದಿದ್ದೆವು, ಬಿಜೆಪಿ 36.34% ಹಾಗೂ 18% ಮತಗಳನ್ನು ಜೆಡಿಎಸ್ ಪಡೆದಿತ್ತು. ನಾವು 1.8% ಮತಗಳನ್ನು ಹೆಚ್ಚು ಪಡೆದಿದ್ದರೂ ನಮಗೆ 80 ಸೀಟು ಹಾಗೂ ಬಿಜೆಪಿಗೆ 104 ಸೀಟು ಬಂದಿತ್ತು. ಆ ನಂತರ ಯಡಿಯೂರಪ್ಪ ಅವರು ಆಪರೇಷನ್ ಕಮಲ ಮಾಡಿ, ಶಾಸಕರನ್ನು ಕೊಂಡುಕೊಂಡು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರು ಎಂದರು.
Related Articles
Advertisement
ಹೈಕೋರ್ಟ್ ನ ಹಾಲಿ ನ್ಯಾಯಾಧೀಶರ ಉಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕಿರುವ ಸಮಸ್ಯೆ ಏನು? ನಾವು ಪ್ರಾಮಾಣಿಕರು, ಯಾವ ಸಚಿವರು ನಯಾಪೈಸೆ ಲಂಚ ಪಡೆದಿಲ್ಲ ಎಂದು ಹೇಳುವ ಬಿಜೆಪಿ ನಾಯಕರು, ನಾನು ಒಂದು ರೂಪಾಯಿ ಲಂಚ ಮುಟ್ಟಿಲ್ಲ ಎನ್ನುವ ಬಸವರಾಜ ಬೊಮ್ಮಾಯಿ ಅವರು, ತಮ್ಮ ವಿರುದ್ಧ ಮಾಡಿರುವ ಆರೋಪ ಸುಳ್ಳು ಎಂದು ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಮುನಿರತ್ನ, ಲಂಚ ಎಂದರೆ ಏನೆಂದು ನಮಗೆ ಗೊತ್ತಿಲ್ಲ ಎನ್ನುವ ಸುಧಾಕರ್ ನ್ಯಾಯಾಂಗ ತನಿಖೆಗೆ ಯಾಕೆ ಒಪ್ಪುತ್ತಿಲ್ಲ? ಎಂದು ಪ್ರಶ್ನಿಸಿದರು.
ಮೊನ್ನೆ ಮೊನ್ನೆ ಕೊಡಗಿನಲ್ಲಿ ರವಿ ಚೆಂಗಪ್ಪ ಎನ್ನುವವರು ಬೊಪಯ್ಯ ಅವರ ಮೇಲೆ ಆರೋಪ ಮಾಡಿದ್ದು, ಎಸಿಬಿ ದಾಳಿ ವೇಳೆ ಸಿಕ್ಕಿಬಿದ್ದು ಜೈಲುಪಾಲಾಗಿದ್ದ ಅಧಿಕಾರಿಯನ್ನು ಮತ್ತೆ ಅದೇ ಸ್ಥಳಕ್ಕೆ ಕೆಲಸಕ್ಕೆ ಹಾಜರಾಗುವಂತೆ ಮಾಡಲು ಬೊಪಯ್ಯ ಅವರು 2.5 ಕೋಟಿ ಲಂಚ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಾ? ಇದಕ್ಕಿಂತ ಬೇರೆ ಸಾಕ್ಷಿ ಏನು ಬೇಕು? ರವಿ ಚೆಂಗಪ್ಪ ನಮ್ಮ ಪಕ್ಷದವರಲ್ಲ, ಅವರು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಎಂದರು.
ಸಿದ್ದರಾಮಯ್ಯ ಹರಿಶ್ಚಂದ್ರನ ಎಂದು ಪ್ರಶ್ನೆ ಮಾಡುತ್ತಾರೆ. ನನ್ನನ್ನು ನಾನು ಯಾವತ್ತೂ ಹರಿಶ್ಚಂದ್ರನ ವಂಶದವನು ಎಂದು ಹೇಳಿಕೊಂಡಿಲ್ಲ, ನಮ್ಮ ಕಾಲದಲ್ಲೂ ಹಗರಣ ಆಗಿದೆ ಎನ್ನುತ್ತಾರೆ, ಆಗ ನಾನು 5 ಪ್ರಕರಣಗಳನ್ನು ಸಿಬಿಐ ಗೆ ವಹಿಸಿದ್ದೆ, ಆಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇತ್ತು. ಇವರೂ ಸಿಬಿಐಗೆ ಕೊಡಲಿ, ತನಿಖೆ ನಡೆಸಲಿ. ಆರೋಪ ಬಂದ ಕೂಡಲೇ ನಾನು ಸಿಬಿಐಗೆ ವಹಿಸಿದ್ದೆ. ನಮ್ಮ ಕಾಲದಲ್ಲೂ ಹಗರಣ ನಡೆದಿದ್ದರೆ ಅದನ್ನೂ ಸೇರಿಸಿ ತನಿಖೆಗೆ ಒಪ್ಪಿಸಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗಂಭೀರ ಆರೋಪಗಳು ಬಂದಾಗ ನೆಪ ಹೇಳುವ ಅಥವಾ ಅದರಿಂದ ತಪ್ಪಿಸಿಕೊಳ್ಳುವ ಭಂಡತನ ಪ್ರದರ್ಶನ ಮಾಡಬಾರದು ಎಂದರು.
2013ರ ನಮ್ಮ ಪ್ರಣಾಳಿಕೆ ಹಾಗೂ 2018ರ ಬಿಜೆಪಿ ಪ್ರಣಾಳಿಕೆಯನ್ನು ಇಟ್ಟುಕೊಂಡು ಚರ್ಚೆ ಮಾಡೋಣ ಬನ್ನಿ. ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ 1 ಲಕ್ಷದ ವರೆಗಿನ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡುತ್ತೇವೆ ಎಂದಿದ್ದರು. ರೈತರ ಬೆಳೆಗೆ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಬೆಲೆ ಕೊಡುತ್ತೇವೆ, ಬಾಕಿ ಇರುವ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 5 ವರ್ಷದಲ್ಲಿ ಒಂದೂವರೆ ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದಿದ್ದರು. ಆದರೆ 4 ವರ್ಷದಲ್ಲಿ ಖರ್ಚು ಮಾಡಿದ್ದೆಷ್ಟು? ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಎಸಿಬಿ ರದ್ದು ಮಾಡುತ್ತೇವೆ ಎಂದಿದ್ದರು, ಮುಖ್ಯಮಂತ್ರಿಗಳ ಹೆಸರಲ್ಲಿ ಪ್ರತೀ ತಾಲೂಕಿಗೆ ಒಂದರಂತೆ ಒಟ್ಟು 300 ಕ್ಯಾಂಟೀನ್ ನಿರ್ಮಾಣ ಮಾಡುತ್ತೇವೆ ಎಂದು ಹೇಳಿ ಇರುವ ಇಂದಿರಾ ಕ್ಯಾಂಟೀನ್ ಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಬಿಜೆಪಿಯ 90% ಗೂ ಅಧಿಕ ಭರವಸೆಗಳು ಈಡೇರಿಕೆಯಾಗದೆ ಹಾಗೆಯೇ ಉಳಿದಿದೆ ಎಂದರು.
ಪಿಎಸ್‌ಐ ನೇಮಕಾತಿಗೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸದನದಲ್ಲಿ ಉತ್ತರ ನೀಡುತ್ತಾ, ಈ ನೇಮಕಾತಿಯಲ್ಲಿ ಯಾವ ಭ್ರಷ್ಟಾಚಾರ, ಅಕ್ರಮ ನಡೆದಿಲ್ಲ, ಕಾನೂನು ರೀತಿ ನೇಮಕಾತಿ ನಡೆದಿದೆ ಎಂದಿದ್ದರು. ಇದೇ ರೀತಿ ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದರು. ಆದರೆ ಈಗ ಏನಾಗಿದೆ? ಎಡಿಜಿಪಿ ಅಮೃತ್ ಪೌಲ್ ಅವರು 300 ಅಭ್ಯರ್ಥಿಗಳಿಂದ 30ಲಕ್ಷದಿಂದ 1 ಕೋಟಿ ವರೆಗೆ ಹಣ ವಸೂಲಿ ಮಾಡಿದ್ದಾರೆ. ಸಿಐಡಿ ಅವರು ಪ್ರಕರಣದ ತನಿಖೆ ಮಾಡುತ್ತಿದ್ದಾರೆ. ಇದನ್ನು ನ್ಯಾಯಾಂಗ ತನಿಖೆಗೆ ನೀಡಿ ಎಂದು ಒತ್ತಾಯ ಮಾಡಿದ್ದೆ, ಕಾರಣ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ತನಿಖೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಇವರೆಲ್ಲರೂ ಪ್ರಕರಣದಲ್ಲಿ ಷಾಮೀಲಾಗಿದ್ದಾರೆ, ಸತ್ಯ ಹೊರಬರಬೇಕಾದರೆ ನ್ಯಾಯಾಂಗ ತನಿಖೆಯಿಂದ ಮಾತ್ರ ಸಾಧ್ಯ ಎಂದು ಹೇಳಿದ್ದೆ. ಈಗ ಕೃತ್ಯವನ್ನು ಅಧಿಕಾರಿಗಳ ತಲೆಗೆ ಕಟ್ಟಿ, ಬೇರೆಯವರು ಸೇಫ್ ಆಗಿದ್ದಾರೆ. ಹೀಗೆ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲೂ ಅಕ್ರಮ ನಡೆದಿದೆ, ಕೆಇಬಿ ಯಲ್ಲೂ ಅಕ್ರಮ ನಡೆದಿದೆ. ವರ್ಗಾವಣೆ ಪ್ರಕ್ರಿಯೆ ಎಂಬುದು ಹೋಟೆಲ್ ತಿಂಡಿಯ ಹಾಗೆ ಬೆಲೆ ನಿಗದಿ ಮಾಡಿದ್ದಾರೆ. ಎಸ್.ಪಿ ಇಂದ ಹಿಡಿದು ಪೇದೆಗಳ ವರೆಗೆ ಒಂದೊಂದು ಬೆಲೆ ನಿಗದಿ ಮಾಡಿದ್ದಾರೆ. ವರ್ಗಾವಣೆಯಾದ ಒಂದು ವರ್ಷದಲ್ಲಿ ಎಷ್ಟಾದರೂ ಹಣ ಹೊಡೆಯಿರಿ ಎಂದು ಅವರಿಗೆ ಅವಕಾಶ ಕೊಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ನನ್ನ 5 ವರ್ಷಗಳ ಅಧಿಕಾರದ ಅವಧಿಯಲ್ಲಿ ಎನ್,ಒ,ಸಿ ಕೊಡಲು ಯಾವುದೇ ಒಬ್ಬ ವ್ಯಕ್ತಿ ಒಂದು ಪೈಸೆ ನನಗೆ ಲಂಚ ನೀಡಿರುವ ಉದಾಹರಣೆ ಇದ್ದರೆ ತೋರಿಸಿ ನೋಡೋಣ. ಆದರೆ ಈ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ. ಹೋಗಲಿ ಅಭಿವೃದ್ಧಿ ಕಾರ್ಯಗಳಾದರೂ ನಡೆಯುತ್ತಿವೆಯಾ ಅದೂ ಇಲ್ಲ. ಈಗ ಘೋಷಣೆ ಮಾಡುತ್ತಿರುವ ಯೋಜನೆಗಳಿಗೆ ಹಣವೇ ಇಲ್ಲ, ಹಣ ಇಲ್ಲದಿದ್ದರೂ ಯೋಜನೆ ಘೋಷಿಸಿ ಮುಂದೆ ನೋಡೋಣ ಎಂದು ಸುಮ್ಮನಾಗುತ್ತಿದ್ದಾರೆ ಎಂದರು.
ಲೋಕೋಪಯೋಗಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ನೀರಾವರಿ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸೇರಿ 22,000 ಕೋಟಿ ಬಿಲ್ ಹಣ ಬಿಡುಗಡೆಗೆ ಬಾಕಿ ಇದೆ. 40% ಸರ್ಕಾರಕ್ಕೆ, 20% ಗುತ್ತಿಗೆದಾರನಿಗೆ, 15% ಜಿಎಸ್‌ಟಿ ಗೆ, ಉಳಿದ 25% ನಲ್ಲಿ ಕಾಮಗಾರಿ ನಡೆಯುತ್ತಿದೆ. ಹೀಗಿದ್ದಾಗ ಗುಣಮಟ್ಟದ ಕಾಮಗಾರಿ ಹೇಗೆ ಸಾಧ್ಯ? ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳ್ಳಲ್ಲ. ನಮ್ಮ ಸರ್ಕಾರದ 5 ವರ್ಷಗಳಲ್ಲಿ 15 ಲಕ್ಷ ಮನೆಗಳನ್ನು ಮಂಜೂರು ಮಾಡಿ, ಕಟ್ಟಿಸಿಕೊಟ್ಟಿದ್ದೆವು. ಕಳೆದ ನಾಲ್ಕು ವರ್ಷಗಳಲ್ಲಿ ಒಂದು ಮನೆ ಮಂಜೂರು ಮಾಡಿ, ಮನೆ ಕಟ್ಟಿಸಿದ ಉದಾಹರಣೆ ಇದ್ದರೆ ತೋರಿಸಿ ನೋಡೋಣ. ಬಡವರಿಗೆ ಒಂದು ನಿವೇಶನ ಕೊಟ್ಟಿದ್ದರೆ ತೋರಿಸಿ. ಇದೇ ವಿಚಾರವನ್ನು ಸದನದಲ್ಲಿ ಸಚಿವ ಸೋಮಣ್ಣ ಅವರಿಗೆ ಕೇಳಿದರೆ, ಈಗ ಸರ್ಕಾರ ಆದೇಶ ನೀಡಿದೆ, ಮುಂದೆ ಮನೆ ಕಟ್ಟಿಸಿಕೊಡುತ್ತೇವೆ ಎಂದು ಉತ್ತರಿಸಿದರು ಎಂದರು.
ಕೊರೊನಾ ಕಾಲದಲ್ಲಿ ಮಾಸ್ಕ್, ಔಷಧಿ, ವೆಂಟಿಲೇಟರ್ ನಲ್ಲಿ ಹಣ ಲೂಟಿ ಮಾಡಿದರು. ದಾಖಲೆ ಸಮೇತ ಸದನದಲ್ಲಿ ಪ್ರಸ್ತಾಪಿಸಿ ತನಿಖೆ ಮಾಡುವಂತೆ ಒತ್ತಾಯ ಮಾಡಿದೆ, ಸರ್ಕಾರ ಏನು ಕ್ರಮ ತೆಗೆದುಕೊಂಡಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರದ ಕಾಲದಲ್ಲಿ ಸಾಲ ಹೆಚ್ಚಾಗಿತ್ತು ಎಂದು ಮಾತೆತ್ತಿದರೆ ಆರೋಪ ಮಾಡುತ್ತಿದ್ದರು, ಸ್ವಾತಂತ್ರ್ಯ ಬಂದ ನಂತರದಿಂದ 2018ರ ಬಜೆಟ್ ಮಂಡನೆ ಮಾಡುವ ವೇಳೆಗೆ ಕರ್ನಾಟಕದ ಮೇಲೆ ಇದ್ದ ಒಟ್ಟು ಸಾಲ 2 ಲಕ್ಷದ 42 ಸಾವಿರ ಕೋಟಿ. ಇದು ಈ ವರ್ಷದ ಕೊನೆಗೆ 5 ಲಕ್ಷದ 40 ಸಾವಿರ ಕೋಟಿಗೆ ಹೆಚ್ಚಾಗುತ್ತದೆ. 14,000 ಕೋಟಿ ಅಸಲು ಮತ್ತು 29,000 ಕೋಟಿ ಬಡ್ಡಿ, ಒಟ್ಟು ಅಸಲು ಮತ್ತು ಬಡ್ಡಿಗೆ 43,000 ಕೋಟಿ ರೂಪಾಯಿ ಕಟ್ಟಬೇಕು. ಈ ಹಣ ಅಭಿವೃದ್ಧಿ ಕಾರ್ಯಗಳಿಗೆ ಸಿಗುವುದಿಲ್ಲ. ಇವೆಲ್ಲಾ ಬದ್ಧತಾ ಖರ್ಚುಗಳು. ಹಾಗಾಗಿ ಕಳೆದ ಮೂರು ವರ್ಷದಿಂದ ರಾಜಸ್ವ ಕೊರತೆ ಉಂಟಾಗಿದೆ. ರಾಜಸ್ವ ಸಂಗ್ರಹಕ್ಕಿಂತ, ಖರ್ಚು ಹೆಚ್ಚಾಗಿದೆ. ನಾನು ಐದು ವರ್ಷ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವನಾಗಿದ್ದಾಗ ಎಲ್ಲಾ ವರ್ಷಗಳೂ ರಾಜಸ್ವ ಉಳಿಕೆ ಇತ್ತು. ಒಂದು ವರ್ಷವೂ ರಾಜಸ್ವ ಕೊರತೆ ಎದುರಾಗಿರಲಿಲ್ಲ. ನಾವು 20 ರಿಂದ 22 ಸಾವಿರ ಕೋಟಿ ಸಾಲ ತೆಗೆದುಕೊಳ್ಳುತ್ತಿದ್ದೆವು, ಈ ವರ್ಷ ಸರ್ಕಾರ 80,000 ಕೋಟಿ ಸಾಲ ಮಾಡಿದೆ ಎಂದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಿಗೆ ನೀಡಿರುವ ಅನುದಾನ ನೋಡಿ. ನಿಗಮಗಳ ಮೂಲಕ 60-70 ಬೋರ್ ವೆಲ್ ತೋಡಿಕೊಡುತ್ತಿದ್ದೆವು, ಈಗ ಒಂದು ಬೋರ್ ವೆಲ್ ತೆಗೆಸಿಕೊಡುತ್ತಿದ್ದಾರೆ. ಸಾಕ? ಇದೇನಾ ಬಡವರ ಬಗ್ಗೆ ಕಾಳಜಿ? ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರದ ಕೊನೆಯ ಬಜೆಟ್ ಗಾತ್ರ 2 ಲಕ್ಷದ 2 ಸಾವಿರ ಕೋಟಿ, ಇದರಲ್ಲಿ ಎಸ್,ಸಿ,ಪಿ/ಟಿ,ಎಸ್,ಪಿ ಯೋಜನೆಗೆ ನೀಡಿದ್ದ ಅನುದಾನ 30,000 ಕೋಟಿ. ಈಗಿನ ಬಜೆಟ್ ಗಾತ್ರ 2 ಲಕ್ಷದ 65 ಸಾವಿರ ಕೋಟಿ ಮತ್ತು ಈ ಯೋಜನೆಗೆ ನೀಡಿರುವ ಅನುದಾನ 28,324 ಕೋಟಿ. ಈ ಅನುದಾನವನ್ನು ಬೇರೆ ಕಡೆಗೆ ಬಳಕೆ ಮಾಡಿಕೊಳ್ಳಬಾರದು ಎಂಬ ನಿಯಮವಿದೆ, ಆದರೆ ಸರ್ಕಾರ 7,885 ಕೋಟಿ ಬೇರೆ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿದೆ. ಇಲ್ಲಿ ಸರ್ಕಾರ ಎಲ್ಲಿದೆ? ಸರ್ಕಾರ ಸತ್ತು ಹೋಗಿದೆ, ಕೆಟ್ಟು ನಿಂತಿದೆ. ಇದೇ ಕಾರಣಕ್ಕೆ ಮಾಧುಸ್ವಾಮಿ ಅವರು ರಾಜ್ಯದಲ್ಲಿ ಸರ್ಕಾರವೂ ಇಲ್ಲ, ಆಡಳಿತವೂ ಇಲ್ಲ, ಸುಮ್ಮನೆ ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದಿದ್ದಾರೆ. ಇಂಥಾ ವಿಚಾರಗಳನ್ನು ನಾನು ಮಾತನಾಡಿದರೆ ಸಿದ್ದರಾಮಯ್ಯ ಮಾಂಸ ತಿಂದು ದೇವಸ್ಥಾನಕ್ಕೆ ಹೋದರು, ಸಾವರ್ಕರ್ ಗೆ ಅವಮಾನ ಮಾಡಿದರು ಎನ್ನುತ್ತಾ ಧರ್ಮ, ಜಾತಿ ವಿಚಾರಗಳಲ್ಲಿ ಜನರನ್ನು ತಪ್ಪು ದಾರಿಗೆ ಎಳೆಯಲು ನೋಡುತ್ತಾರೆ ಎಂದರು.
ಲಂಚ ಕೊಡುವವರು ಇರುವವರೆಗೆ ಲಂಚ ಪಡೆಯುವವರು ಇರುತ್ತಾರೆ, ತಾವಾಗಿಯೇ ಲಂಚ ಕೊಡುವುದು ಬೇರೆ, ಲಂಚ ನೀಡದಿದ್ದರೆ ಬಿಲ್ ಹಣ ಬಿಡುಗಡೆ ಮಾಡಲ್ಲ ಎಂದು ಒತ್ತಡ ಹೇರಿ ಲಂಚ ಪಡೆಯುವುದು ಬೇರೆ. ಈಗ 40% ಕಮಿಷನ್ ಕಡ್ಡಾಯ ಮಾಡಲಾಗಿದೆ. ಸಂತೋಷ್ ಪಾಟೀಲ ಎಂಬ ಗುತ್ತಿಗೆದಾರ ಈಶ್ವರಪ್ಪ ಅವರ ಲಂಚದ ಕಿರುಕುಳಕ್ಕೆ ನೊಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ. ಇದರಿಂದ ಈಶ್ವರಪ್ಪ ಅವರು ರಾಜೀನಾಮೆ ನೀಡಬೇಕಾಯಿತು. ಲಂಚ ಕೊಡುವುದಿಲ್ಲ ಎನ್ನುವವರು ಸಂತೋಷ್ ಪಾಟೀಲ್ ನಂತೆ ಸಾಯಬೇಕಾಗುತ್ತದೆ ಎಂದರು.
ಸರ್ಕಾರವೇ ಭ್ರಷ್ಟವಾಗಿದ್ದರೆ ಭ್ರಷ್ಟರ ಮೇಲೆ ಯಾವ ಕ್ರಮ ಕೈಗೊಳ್ಳಲ್ಲ. ಈಶ್ವರಪ್ಪ ಅವರ ಮೇಲಿನ ಆರೋಪದಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ, ಅದನ್ನು ಮೃತನ ಸಹೋದರ ಚಾಲೆಂಜ್ ಮಾಡಿದ್ದಾರೆ. ಮುಂದೇನಾಗುತ್ತದೋ ಗೊತ್ತಿಲ್ಲ, ಆದರೆ ಈ ರೀತಿ ಪ್ರಕರಣವನ್ನು ಮುಚ್ಚಿಹಾಕುವ ಕೆಲಸ ನಡೆಯಬಾರದು ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದ ಸರ್ಕಾರ ಜನರ ಒತ್ತಾಯಕ್ಕೆ ಮಣಿದು, ಅವರು ಕೇಳಿದ್ದನ್ನು ಮಾಡಬೇಕು. ಒಂದು ವೇಳೆ ಸರ್ಕಾರ ಒತ್ತಾಯಕ್ಕೆ ಮನ್ನಣೆ ನೀಡದೆ ಹೋದರೆ ಜನರ ಬಳಿಗೆ ಹೋಗುತ್ತೇವೆ. ಜನರೇ ಸರಿಯಾದ ತೀರ್ಪು ನೀಡುತ್ತಾರೆ ಎಂದರು.
ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಾವು ಕೊರೊನಾ ಕಾಲದಲ್ಲಿ ನಡೆದ, ಗುತ್ತಿಗೆ ಕಾಮಗಾರಿಗಳಲ್ಲಿನ ಭ್ರಷ್ಟಾಚಾರ, ಸರ್ಕಾರದ ವೈಫಲ್ಯಗಳ ಬಗ್ಗೆ, ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸದಿರುವ ಬಗ್ಗೆ ಪ್ರತಿಭಟನೆ ಮಾಡಿದ್ದೇವೆ, ಸದನದಲ್ಲೂ ಪ್ರಸ್ತಾಪ ಮಾಡಿದ್ದೇವೆ, ನಮ್ಮ ಮಾತಿಗೆ ಸರ್ಕಾರ ಬೆಲೆ ಕೊಡದಿದ್ದರೆ ಇದಕ್ಕಿಂತ ಹೆಚ್ಚಿನದ್ದನ್ನು ನಮ್ಮಿಂದ ಏನು ಮಾಡಲು ಸಾಧ್ಯ? ಬಿಜೆಪಿಗೆ ಪ್ರಜಾಪ್ರಭುತ್ವ, ಸಂವಿಧಾನದ ಬಗೆಗೆ ಗೌರವವೂ ಇಲ್ಲ. ಜನಾಭಿಪ್ರಾಯದ ಚಿಂತೆಯೂ ಇಲ್ಲ. ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬರುವವರಿಗೆ ಈ ಬಗ್ಗೆ ಯಾವ ಚಿಂತೆಯೂ ಇರಲ್ಲ. ನಾವು ಬಿಜೆಪಿಯನ್ನು, ಸಾವರ್ಕರ್ ಅವರನ್ನು, ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರನ್ನು ವಿರೋಧ ಮಾಡೋದು ಸೈದ್ಧಾಂತಿಕವಾಗಿ, ವೈಯಕ್ತಿಕವಾಗಿ ಅಲ್ಲ ಎಂದರು.
ಎಸಿಬಿ ರದ್ದತಿಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪನ್ನು ನಾವು ಸ್ವಾಗತಿಸಿದ್ದೇವೆ. ಎಸಿಬಿ ರಚನೆಗೆ ಕಾರಣವೆಂದರೆ ಭಾಸ್ಕರ್ ರಾವ್ ಎಂಬ ಲೋಕಾಯುಕ್ತರಿದ್ದರು, ಅವರ ಮಗ ಮನೆಯಲ್ಲಿ ಕೂತು ಲಂಚ ವಸೂಲಿ ಮಾಡುತ್ತಿದ್ದ, ಆದ್ದರಿಂದ ಎಸಿಬಿ ಎಂಬ ಸ್ವತಂತ್ರ ತನಿಖೆಯ ವಿಂಗ್ ರಚನೆ ಮಾಡಿದ್ದೆವು. ಗುಜರಾತ್ ನಲ್ಲಿ ಎಸಿಬಿ ಇದೆ, ಬೇರೆ ಬೇರೆ ರಾಜ್ಯಗಳಲ್ಲೂ ಎಸಿಬಿ ಇದೆ. ಬಿಜೆಪಿ ಯಾಕೆ ಸುಮ್ಮನಿದೆ? ಎಂದು ಪ್ರಶ್ನಿಸಿದರು.
ಸಾವರ್ಕರ್ ಅಭಿಯಾನವನ್ನು ಬಿಜೆಪಿ ಆರಂಭ ಮಾಡಿದೆ. ಸಾವರ್ಕರ್ ಸತ್ತಿದ್ದು 1966ರಲ್ಲಿ, ಅವರು ಜೈಲಿನಿಂದ ಬಿಡುಗಡೆಯಾದದ್ದು 1924 ರಲ್ಲಿ. 1922 ರಿಂದ ದೇಶಕ್ಕೆ ಸ್ವಾತಂತ್ರ್ಯ ಬರುವವರೆಗೆ ಒಮ್ಮೆಯಾದರು ಸ್ವಾತಂತ್ರ್ಯ ಚಳವಳಿಯಲ್ಲಿ ಅವರು ಭಾಗಿಯಾಗಿದ್ದಾರ? ಇದೇ ಆಧಾರದ ಮೇಲೆ ನಾನು ಮಾತನಾಡಿದ್ದು ಎಂದರು.
ಪ್ರತಾಪ್ ಸಿಂಹನಿಗೆ ಸತ್ಯ ಹೇಳಿಯೇ ಗೊತ್ತಿಲ್ಲ, ಅವನೊಬ್ಬ ಯಕಶ್ಚಿತ್ ರಾಜಕಾರಣಿ. ನಮ್ಮ ಪಕ್ಷದ ಲಕ್ಷ್ಮಣ್ ಸೇರಿದಂತೆ ಅನೇಕರು ಅವರಿಗೆ ಸವಾಲು ಹಾಕಿದ್ದಾರೆ, ಅವರ ಜೊತೆ ಚರ್ಚೆಗೆ ಹೋಗಲಿ. ನಾನು ಮುಖ್ಯಮಂತ್ರಿಯಾಗಿ 5 ವರ್ಷದಲ್ಲಿ ಮೈಸೂರು ನಗರಕ್ಕೆ ಏನು ಮಾಡಿದ್ದೇನೆ, ಪ್ರತಾಪ್ ಸಿಂಹ ಸಂಸದರಾಗಿ ಏನು ಮಾಡಿದ್ದಾರೆ ಚರ್ಚೆ ಮಾಡಲಿ. ಮಹಾರಾಣಿ ಕಾಲೇಜು ಕಟ್ಟಿಸಿದ್ದು, ಜಿಲ್ಲಾಸ್ಪತ್ರೆ, ಜಯದೇವಾ ಆಸ್ಪತ್ರೆ ಕಟ್ಟಿಸಿದ್ದು, ಹೆರಿಗೆ ಆಸ್ಪತ್ರೆ ಕಟ್ಟಿಸಿದ್ದು, ಜಯಚಾಮರಾಜೇಂದ್ರ ಪ್ರತಿಮೆ ನಿರ್ಮಾಣ ಮಾಡಿದ್ದು ಪ್ರತಾಪ್ ಸಿಂಹನಾ? ಮೊದಲು ಲಕ್ಷ್ಮಣ್ ಜತೆ ಚರ್ಚೆ ಮಾಡಿ ನಂತರ ನನ್ನ ಬಳಿ ಬರಲಿ ಎಂದು ಸವಾಲು ಹಾಕಿದರು.