Advertisement

ಬಿಜೆಪಿಯವರ ‘ಕೊಡುಗೆ’ ಜಾಹೀರಾತು ರಾಜ್ಯಕ್ಕೆ ಅವಮಾನ: ಸಿದ್ದರಾಮಯ್ಯ

11:53 AM Jun 02, 2022 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡುಗೆ ನೀಡಿದೆ ಎಂದು ಬಿಜೆಪಿಯವರು ನೀಡುತ್ತಿರುವ ಜಾಹೀರಾತು ರಾಜ್ಯದ ಜನತೆಗೆ ಮಾಡುತ್ತಿರುವ ಅವಮಾನ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.

Advertisement

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಅವರು, ಕೊಡುಗೆ ಎಂಬ ಪದ ಬಳಸಿ ಜಾಹೀರಾತು ನೀಡುತ್ತಿರುವುದು ಸರಿಯಲ್ಲ ಎಂದಿದ್ದಾರೆ.

ರಾಜ್ಯ ಮತ್ತು ಕೇಂದ್ರದ ಬಿಜೆಪಿಯವರು ನಮ್ಮ ರಾಜ್ಯದ ಜನರನ್ನೇನು ದಡ್ಡರು, ಯೋಚಿಸುವ ಶಕ್ತಿ ಇಲ್ಲದವರು ಎಂದುಕೊಂಡಿದ್ದಾರಾ? ಈ ಬಿಜೆಪಿಯವರ ತಲೆ ಸರಿ ಇದೆಯಾ? 2014 ರಿಂದ ಇದುವರೆಗೆ 8 ವರ್ಷಗಳಲ್ಲಿ ರಾಜ್ಯಕ್ಕೆ 1,29 ಲಕ್ಷ ಕೋಟಿ ರೂಗಳನ್ನು ನರೇಂದ್ರ ಮೋದಿಯವರು ‘ಕೊಡುಗೆ’ ನೀಡಿದ್ದಾರೆ ಎಂದು ಪ್ರತಿ ನಿತ್ಯ ಜಾಹೀರಾತು ನೀಡಲಾಗುತ್ತಿದೆ. ಕೊಡುಗೆ ಎಂಬ ಪದ ಬಳಸಲು ಮೋದಿ ಅಥವಾ ಬಿಜೆಪಿಯವರು ಅವರ ಸ್ವಂತ ಮನೆಯಿಂದ ತೆಗೆದು ಖುಷಿಗೆ ಗಿಫ್ಟು ಕೊಡುವಂತೆ ಏನಾದರೂ ರಾಜ್ಯಕ್ಕೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಬಿಜೆಪಿ ಸರ್ಕಾರಕ್ಕೆ ಏನಾದರೂ ಬೆನ್ನು ಮೂಳೆ ಇದ್ದರೆ ಮೊದಲು ಈ ಜಾಹಿರಾತಿಗೆ ವಿರೋಧ ವ್ಯಕ್ತಪಡಿಸಬೇಕಾಗಿತ್ತು. ಯಾಕೆಂದರೆ ಕಳೆದ ಎಂಟು ವರ್ಷಗಳಲ್ಲಿ ಮೋದಿಯವರ ರಾಜ್ಯ ವಿರೋಧಿ ಧೋರಣೆಯಿಂದ ನಾವು ಬಹಳಷ್ಟನ್ನು ಕಳೆದುಕೊಂಡಿದ್ದೇವೆ. ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಈ 8 ವರ್ಷಗಳಲ್ಲಿ ನಮ್ಮ ರಾಜ್ಯದಿಂದ ಕನಿಷ್ಟ ಎಂದರೂ 19 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಒಂದರ್ಥದಲ್ಲಿ ದೋಚಿಕೊಂಡಿದೆ ಎಂದರೂ ಸರಿಯೆ. ಇಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸಿ ಟಿಪ್ಸು ಕೊಟ್ಟಂತೆ ಕೆಲವು ಯೋಜನೆಗಳಿಗೆ ಕೊಟ್ಟಿರುವ 1.29 ಲಕ್ಷ ಕೋಟಿ ಅನುದಾನಗಳನ್ನು ಕೊಡುಗೆ ಎಂದು ಹೇಳಿ ರಾಜ್ಯದ ಸ್ವಾಭಿಮಾನವನ್ನು ದಿಲ್ಲಿಯ ಕಾಲ ಕೆಳಗೆ ಹಾಕಿರುವ ರಾಜ್ಯ ಬಿಜೆಪಿಗರಿಗೆ ಸ್ವಾಭಿಮಾನ ಎಂಬುದು ಏನಾದರೂ ಇದೆಯೆ? ಎಂಬ ಪ್ರಶ್ನೆಯನ್ನು ಈ ನಾಡಿನ ಪ್ರಜ್ಞಾವಂತರು ಕೇಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ಎರಡನೇ ಅಭ್ಯರ್ಥಿ ಹಿಂಪಡೆಯಲು ಕಾಂಗ್ರೆಸ್ ನಲ್ಲೇ ಆಗ್ರಹ: ನಾಳೆ ನಾಮಪತ್ರ ವಾಪಾಸ್?

Advertisement

ಇದರಲ್ಲಿ ನರೇಗ ಯೋಜನೆಯಲ್ಲಿ ಜನರು ಕೂಲಿ ಮಾಡಿದ ಹಣ 27418 ಕೋಟಿಗಳಷ್ಟಿದೆ. ಹಾಗೆಯೇ ಜನರ ವಿಮೆ ಹಣ ಮುಂತಾದವುಗಳೆಲ್ಲ ಈ ಕೊಡುಗೆಯಲ್ಲಿ ಸೇರಿವೆ. ನರೇಗಾ ಮುಂತಾದ ಯೋಜನೆಗಳಲ್ಲಿ ಜನರ ಬೆವರಿಗೆ ಕೊಡುವ ಪ್ರತಿಫಲವನ್ನು ಈ ಬಿಜೆಪಿಯವರು ಕೊಡುಗೆ ಎನ್ನುತ್ತಾರಲ್ಲ, ಇವರು ಮನುಷ್ಯರಾ ಎಂಬುದು ನನ್ನ ಅನುಮಾನ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕರ್ನಾಟಕವು ದೇಶದ ಆರ್ಥಿಕತೆಗೆ ಅತಿದೊಡ್ಡ ಕೊಡುಗೆ ನೀಡುತ್ತಿರುವ ಎರಡನೇ ರಾಜ್ಯ. ಮಹಾರಾಷ್ಟ್ರದ ನಂತರ ಅತಿ ಹೆಚ್ಚು ಜಿಎಸ್‍ಟಿ ಪಾವತಿಸುತ್ತಿರುವ ರಾಜ್ಯ ನಮ್ಮದು. ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆಯ ಪಾವತಿಯಲ್ಲೂ ಸಹ ನಮ್ಮ ರಾಜ್ಯವು ನಿರಂತರವಾಗಿ ಎರಡು ಅಥವಾ ಮೂರನೆ ಸ್ಥಾನದಲ್ಲಿದೆ. ನನ್ನ ಬಳಿ ಆದಾಯ ತೆರಿಗೆ ಇಲಾಖೆಯ 2018-19 ರ ಅಧಿಕೃತ ದಾಖಲೆ ಇದೆ. ಅದರ ಪ್ರಕಾರ ಮಹಾರಾಷ್ಟ್ರ ರಾಜ್ಯವು 4.25 ಲಕ್ಷ ಕೋಟಿ ರೂಗಳಷ್ಟನ್ನು ನೇರ ತೆರಿಗೆಯ ರೂಪದಲ್ಲಿ ಪಾವತಿಸುತ್ತಿದೆ. ದೆಹಲಿಯು 1.66 ಲಕ್ಷ ಕೋಟಿಗಳನ್ನು ಪಾವತಿಸಿತ್ತು. ನಮ್ಮ ರಾಜ್ಯದಿಂದ 1.20 ಲಕ್ಷ ಕೋಟಿಗಳನ್ನು ಕೇಂದ್ರವು ನೇರ ತೆರಿಗೆಯ ಮೂಲಕ ಸಂಗ್ರಹಿಸಿತ್ತು. ಪ್ರಸ್ತುತ ಕರ್ನಾಟಕವು 1.40 ಲಕ್ಷ ಕೋಟಿಗಳಷ್ಟು ನೇರ ತೆರಿಗೆಯನ್ನು [ಆದಾಯ ಮತ್ತು ಕಾರ್ಪೊರೇಟ್ ತೆರಿಗೆ] ಯನ್ನು ಪಾವತಿಸುತ್ತಿದೆ. ಉಳಿದಂತೆ ಗುಜರಾತ್ ಮಾಡೆಲ್ ಎಂದು ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದ ಮೋದಿಯವರ ರಾಜ್ಯವಾದ ಗುಜರಾತ್ 2018-19 ರಲ್ಲಿ ಪಾವತಿಸಿದ್ದು ಕೇವಲ 49 ಸಾವಿರ ಕೋಟಿ ಮಾತ್ರ. ಆಂಧ್ರ ಪ್ರದೇಶ 46 ಸಾವಿರ ಕೋಟಿ, ಮಧ್ಯಪ್ರದೇಶ 19.7 ಸಾವಿರ ಕೋಟಿ, ಬಿಹಾರ 6.2 ಸಾವಿರ ಕೋಟಿ, ರಾಜಸ್ತಾನ 21 ಸಾವಿರ ಕೋಟಿ, ಉತ್ತರ ಪ್ರದೇಶ 27 ಸಾವಿರ ಕೋಟಿ ಮಾತ್ರ. ತಮಿಳುನಾಡು 74.3 ಸಾವಿರ ಕೋಟಿ ಪಾವತಿಸಿತ್ತು ಎಂದು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next