Advertisement

ಗೆಲ್ಲದ 77 ಕ್ಷೇತ್ರಗಳತ್ತ ಬಿಜೆಪಿಯ ಗಮನ: ಹಳೆ ಮೈಸೂರು, ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ

01:39 AM Jul 20, 2022 | Team Udayavani |

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತಾನು ಒಮ್ಮೆಯೂ ಗೆಲ್ಲದ 77 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಬಗ್ಗೆ ಗಮನಹರಿಸಿದೆ.

Advertisement

ಆ ಮೂಲಕ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಬಗ್ಗೆ ಚಿಂತನೆ ನಡೆಸಲು ಪಕ್ಷ ತೀರ್ಮಾನಿಸಿದೆ.
ಇತ್ತೀಚೆಗೆ ನಡೆದ ರಾಜ್ಯ ನಾಯಕರ ಚಿಂತನ ಮಂಥನ ಸಭೆಯಲ್ಲಿ ಈ ಅಂಶ ಗಂಭೀರವಾಗಿ ಚರ್ಚೆಯಾಗಿದೆ.

1950 ರಲ್ಲಿ ಜನಸಂಘ ಸ್ಥಾಪನೆಯಾದಾಗಿನಿಂದ ಮತ್ತು 1980ರಲ್ಲಿ ಬಿಜೆಪಿ ಸ್ಥಾಪನೆ ಆದಾಗಿನಿಂದ ರಾಜ್ಯದ 224 ಕ್ಷೇತ್ರಗಳ ಪೈಕಿ ಯಾವ ಕ್ಷೇತ್ರಗಳಲ್ಲಿ ಬಿಜೆಪಿ ಎಷ್ಟು ಬಾರಿ ಗೆಲುವು ಸಾಧಿಸಿದೆ ಎನ್ನುವ ಕುರಿತು ಗಂಭೀರ ಪರಾಮರ್ಶೆ ನಡೆಸಲಾಗಿದೆ.

ಬಿಜೆಪಿ ರಾಜ್ಯದಲ್ಲಿ 77 ಕ್ಷೇತ್ರದಲ್ಲಿ ಇದುವರೆಗೆ ಒಮ್ಮೆಯೂ ಗೆಲುವು ಸಾಧಿಸದಿರುವ ಅಂಶ ಬೆಳಕಿಗೆ ಬಂದಿದೆ. ಅಂತಹ ಕ್ಷೇತ್ರ ಗಳನ್ನು ಪಟ್ಟಿ ಮಾಡಿ ಅಲ್ಲಿ ಗೆಲ್ಲದೆ ಇರಲು ಕಾರಣ, ಅಲ್ಲಿರುವ ಜಾತಿ ಸಮೀಕರಣ, ಸ್ಥಳೀಯವಾಗಿ ಪಕ್ಷದ ಪರಿಸ್ಥಿತಿ, ಬೇರೆ ಪಕ್ಷಗಳ ಪ್ರಭಾವಿ ನಾಯಕರ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಹಳೆ ಮೈಸೂರು, ಕಲ್ಯಾಣ ಕರ್ನಾಟಕದಲ್ಲೇ ಹೆಚ್ಚು
ಜನಸಂಘ, ಬಿಜೆಪಿ ಸ್ಥಾಪನೆಯಾದಾಗಿನಿಂದ ಹಳೆ ಮೈಸೂರು ಭಾಗದ ಕೆಲವು ಜಿಲ್ಲೆಗಳಲ್ಲಿ ಅಧಿಕೃತವಾಗಿ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಕಲ್ಯಾಣ ಕರ್ನಾಟಕ ಭಾಗದ ಕೆಲವು ಜಿಲ್ಲೆಗಳಲ್ಲಿಯೂ ಇದೇ ಪರಿಸ್ಥಿತಿ ಇದೆ.
ರಾಜ್ಯದಲ್ಲಿ ಬಿಜೆಪಿ 2008 ಮತ್ತು 2018ರಲ್ಲಿ ಅತೀ ಹೆಚ್ಚು ಸ್ಥಾನ ಗಳಿಸಿದ್ದರೂ ಸ್ಪಷ್ಟ ಬಹುಮತ ಪಡೆಯಲು ಸಾಧ್ಯ ವಾಗಿರಲಿಲ್ಲ. ಇದರ ಪರಿಣಾಮವಾಗಿ ಸರಕಾರ ರಚನೆ ಮಾಡಲಾಗದೆ ಬೇರೆ ಪಕ್ಷಗಳ ಶಾಸಕರನ್ನು ಆಪರೇಷನ್‌ ಕಮಲದ ಮೂಲಕ ಕರೆತಂದು ರಾಜೀನಾಮೆ ಕೊಡಿಸಿ, ಮತ್ತೆ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

Advertisement

2023ರ ಚುನಾವಣೆಯಲ್ಲಿ ಅಂತಹ ಪರಿಸ್ಥಿತಿ ನಿರ್ಮಾಣ ವಾಗದಂತೆ ಈಗಿನಿಂದಲೇ ಶ್ರಮಿಸಬೇಕು ಎಂದು ತಿರ್ಮಾನಿಸಲಾಗಿದೆ. ಮಿಷನ್‌ 150 ಭಾಗವಾಗಿ ಎಂದೂ ಗೆಲ್ಲದ ಈ 77 ಕ್ಷೇತ್ರಗಳನ್ನು ಗಂಭೀರವಾಗಿ ಪರಿಗಣಿಸಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿದು ಬಂದಿದೆ.

ಅನ್ಯ ಪಕ್ಷಗಳ ನಾಯಕರ ಆಮದು
ಈ 77 ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆಯ ಸ್ಥಿತಿಗತಿ ಅರಿತು ಅಲ್ಲಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಹಾಲಿ, ಮಾಜಿ ಶಾಸಕರು ಅಥವಾ ಪ್ರಬಲ ನಾಯಕರನ್ನು ಚುನಾವಣೆಗೆ ಮುನ್ನವೇ ಪಕ್ಷಕ್ಕೆ ಸೆಳೆಯುವ ಬಗ್ಗೆಯೂ ಗಂಭೀರ ಚರ್ಚೆ ನಡೆಸಲಾಗಿದೆ ಎನ್ನಲಾಗಿದ್ದು, ಅದಕ್ಕೆ ಪೂರಕ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next