Advertisement
ಸಂಪುಟ ವಿಸ್ತರಣೆ ವೇಳೆ ಪರಿಶಿಷ್ಟ ಜಾತಿ ಹಾಗೂ ಒಕ್ಕಲಿಗ ಸಮುದಾಯಕ್ಕೆ ತಲಾ ಮೂರು, ಹಿಂದುಳಿದ ವರ್ಗಕ್ಕೆ ಎರಡು ಹಾಗೂ ಬ್ರಾಹ್ಮಣ, ಪರಿಶಿಷ್ಟ ಪಂಗಡಕ್ಕೆ ತಲಾ ಒಂದು ಸಚಿವ ಸ್ಥಾನ ನೀಡುವ ಮೂಲಕ ಜಾತಿ ಪ್ರಾತಿನಿಧ್ಯವನ್ನು ಸರಿದೂಗಿಸುವ ಲೆಕ್ಕಾಚಾರ ನಡೆಸಲಾಗಿದೆ. ಮುಂದೆ ಎದುರಾಗಲಿರುವ ಉಪಚುನಾವಣೆಗಳು, ಒಂದೊಮ್ಮೆ ಬದಲಾದ ಸನ್ನಿವೇಶದಲ್ಲಿ ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ಎದುರಾದರೆ, ಇಲ್ಲವೇ ಮುಂದಿನ ಸಾರ್ವತ್ರಿಕ ಚುನಾವಣೆಗೆ ಪಕ್ಷವನ್ನು ಇನ್ನಷ್ಟು ಸದೃಢವಾಗಿ ಸಜ್ಜುಗೊಳಿಸುವ ಕಾರ್ಯತಂತ್ರ ಹೆಣೆದಂತಿದೆ.
Related Articles
Advertisement
ಲೋಕಸಭಾ ಗೆಲುವಿಗೆ ಉಡುಗೊರೆ: ನೂತನ ಸಚಿವರ ಆಯ್ಕೆಗೆ ಜಾತಿ, ಜಿಲ್ಲೆ- ಪ್ರಾದೇಶಿಕತೆಯ ಪ್ರಾತಿನಿಧ್ಯವಿದ್ದಂತೆ ಕಂಡು ಬಂದರೂ ಆಯ್ದ ಸಮುದಾಯಗಳ ಕೊಡುಗೆಯನ್ನು ಪ್ರಧಾನವಾಗಿ ಪರಿಗಣಿಸಲಾಗಿದೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಬಿಜೆಪಿ ಬೆಂಬಲಿತ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಬಿಜೆಪಿಯ 26 ಮಂದಿ ಜಯ ಗಳಿಸಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಮೀಸಲಾದ ಏಳೂ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಿದೆ. ಬಿಜೆಪಿಯ ಅಪೂತಪೂರ್ವ ಗೆಲುವಿಗೆ ಲಿಂಗಾಯಿತ ಹಾಗೂ ಪರಿಶಿಷ್ಟ ಜಾತಿ, ಪಂಗಡದ ಮತದಾರರ ಕೊಡುಗೆ ದೊಡ್ಡದಿದ್ದು, ಅದರಂತೆ ಸಂಪುಟದಲ್ಲಿ ಆದ್ಯತೆ ಕಲ್ಪಿಸಲಾಗಿದೆ. ಪಕ್ಷ ಸಂಘಟನೆ ದೃಷ್ಟಿಯಿಂದ ಒಕ್ಕಲಿಗ ಸಮುದಾಯಕ್ಕೂ ಒತ್ತು ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
ಚುನಾವಣೆ ಲಾಭದ ಲೆಕ್ಕ: ರಾಜ್ಯದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. 17 ಶಾಸಕರು ಅನರ್ಹಗೊಂಡ ಹಿನ್ನೆಲೆಯಲ್ಲಿ ವಿಧಾನಸಭೆಯ ಒಟ್ಟು ಸಂಖ್ಯಾಬಲ ಇಳಿಕೆಯಾದ ಪರಿಣಾಮ 105 ಸದಸ್ಯ ಬಲದ ಬಿಜೆಪಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸಿದೆ. ಅನರ್ಹಗೊಂಡ ಶಾಸಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಹಾಗಾಗಿ, ಮುಂದೆ ಉಪಚುನಾವಣೆಗಳು ಎದುರಾದರೆ ಆ ಎಲ್ಲ ಚುನಾವಣೆ ಗೆಲ್ಲುವುದು ಬಿಜೆಪಿಗೆ ಅನಿವಾರ್ಯ. ಹಾಗಾಗಿ, ದೈನಂದಿನ ಆಡಳಿತವನ್ನು ಸುಗಮವಾಗಿ ನಡೆಸಲು ಹಾಗೂ ಪಕ್ಷ ಬಲವರ್ಧನೆ ದೃಷ್ಟಿಯಿಂದ ಸಂಪುಟ ವಿಸ್ತರಿಸಿರುವುದು ಮೇಲ್ನೋಟಕ್ಕೆ ಕಾಣುತ್ತದೆ.
ಮೈತ್ರಿ ಸರ್ಕಾರ ಪತನವಾದ ಬಳಿಕ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವ ಮಾತು ಆಗಾಗ್ಗೆ ಕೇಳಿ ಬರುತ್ತಿದೆ. ಅನಿರೀಕ್ಷಿತ ಬೆಳವಣಿಗೆಯಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ಎದುರಾದರೆ ಅದನ್ನು ಸಮರ್ಥವಾಗಿ ಎದುರಿಸಿ ಸ್ವಂತ ಬಲದ ಸರ್ಕಾರ ರಚಿಸುವ ದೂರದೃಷ್ಟಿಯೂ ಇದೆ. ಸರ್ಕಾರ ಬಾಕಿಯಿರುವ ಅವಧಿಯನ್ನು ಪೂರ್ಣಗೊಳಿಸಿದರೂ ಸಾರ್ವತ್ರಿಕ ಚುನಾವಣೆಯಲ್ಲಿ ಯಶಸ್ಸು ಸಿಗುವಂತಾಗಬೇಕು ಎಂಬ ಲೆಕ್ಕಾಚಾರದಲ್ಲೇ ಸಂಪುಟ ವಿಸ್ತರಣೆ ಮಾಡಲಾಗಿದೆ. ಮುಂದೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನಗಳನ್ನು ಇದೇ ದೃಷ್ಟಿಕೋನದಲ್ಲೇ ಹಂಚಿಕೆ ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ.
* ಎಂ. ಕೀರ್ತಿಪ್ರಸಾದ್