ವಾಡಿ: ಪ್ರಿಯಾಂಕ್ ಖರ್ಗೆ ಪರಿಶ್ರಮದಿಂದ ಪ್ರಗತಿಯ ದಿಕ್ಕಿನಲ್ಲಿ ಸಾಗುತ್ತಿರುವ ಚಿತ್ತಾಪುರ ಮತಕ್ಷೇತ್ರದಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಪೀಕಲಾಟ ನಡೆಸುತ್ತಿರುವ ಕೆಲ ಬಿಜೆಪಿಗರು, ತಳಬುಡವಿಲ್ಲದ ಆರೋಪ ಮಾಡಿ ಜನರಿಗೆ ತಪ್ಪು ಸಂದೇಶ ನೀಡುವ ಕೃತ್ಯಕ್ಕೆ ಕೈಹಾಕಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ರಾಯಚೂರು ಕೃಷಿ ವಿವಿ ಮಾಜಿ ನಿರ್ದೇಶಕ ವೀರಣ್ಣಗೌಡ ಪರಸರೆಡ್ಡಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಮತ್ತು ಚಿತ್ತಾಪುರದಲ್ಲಿ ಬಿಜೆಪಿಯ ದಿ. ವಾಲ್ಮೀಕಿ ನಾಯಕ ಶಾಸಕರಾಗಿದ್ದಾಗ ನಿರ್ಮಿಸಲಾದ ನಾಲವಾರ ಕಸ್ತೂರಿಬಾ ಬಾಲಕಿಯರ ವಸತಿ ನಿಲಯದ ಪಾಳು ಕಟ್ಟಡದ ಮುಂದೆ ನಿಂತು ಪ್ರಿಯಾಂಕ್ ಖರ್ಗೆ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಇದು ಅವರ ದಡ್ಡತನ ಪ್ರದರ್ಶಿಸಿದೆ ಎಂದು ಬಿಜೆಪಿಯ ಮಣಿಕಂಠ ರಾಠೊಡ ವಿರುದ್ಧ ಟೀಕಿಸಿದರು.
ಚಿತ್ತಾಪುರ ಬಿಜೆಪಿಗೆ ಇವರು ಅಧಿಕೃತವೋ ಇಲ್ಲ ಅನಧಿಕೃತ ಸದಸ್ಯರೋ ಗೊತ್ತಿಲ್ಲ. ಇದು ನಮಗೆ ಬೇಕಿಲ್ಲ. ಆದರೆ ಪ್ರಜಾಪ್ರಭುತ್ವದ ನೆಲೆಗಟ್ಟಿನ ಮೇಲೆ ಚರ್ಚೆಗೆ ಬಂದರೆ ಉತ್ತರ ಕೊಡಲು ಕಾಂಗ್ರೆಸ್ ಸಿದ್ಧವಿದೆ ಎಂದರು.
ಒಂದು ಕಟ್ಟಡ ಉದ್ಘಾಟನೆಗೊಳ್ಳುವ ಮೊದಲೇ ಹತ್ತು ವರ್ಷಗಳಿಂದ ಹಾಳು ಬಿದ್ದಿರುವುದಕ್ಕೆ ಕಾರಣ ಯಾರು ಎನ್ನುವ ಅರಿವು ಇವರಿಗಿಲ್ಲ. ಶಾಸಕ ಪ್ರಿಯಾಂಕ್ ಖರ್ಗೆ ತಂದಿರುವ ಸಾವಿರಾರು ಕೋಟಿ ರೂ. ಅನುದಾನದಲ್ಲಿ ಬಿಜೆಪಿ ಸರ್ಕಾರ 270 ಕೋಟಿ ರೂ.ಗಳನ್ನು ವಾಪಸ್ ಪಡೆದುಕೊಂಡು ಕ್ಷೇತ್ರಕ್ಕೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಸಾಹೇಬ್, ಯುವ ಕಾಂಗ್ರೆಸ್ ಅಧ್ಯಕ್ಷ ಶರಣು ವಾರದ್, ಮುಖಂಡರಾದ ಭೀಮರಾವ್ ದೊರೆ, ಟೋಪಣ್ಣ ಕೋಮಟೆ, ಸಿದ್ಧುಗೌಡ ಅಫಜಲಪುರ, ಶಿವುರೆಡ್ಡಿಗೌಡ ಸೋಮರೆಡ್ಡಿ, ಚಂದ್ರಸೇನ ಮೇನಗಾರ, ದೇವಿಂದ್ರ ಕರದಳ್ಳಿ ಇನ್ನಿತರರು ಇದ್ದರು.