ಬೆಂಗಳೂರು: ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮೇಲೆ ಅವರದೇ ಪಕ್ಷದ ಶಾಸಕ ಜೆ.ಎನ್.ಗಣೇಶ್ ಹಲ್ಲೆ ನಡೆಸಿರುವ ಪ್ರಕರಣವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಬಿಜೆಪಿ ನಾಯಕರು ಸದ್ಯ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದಂತಿದೆ.
ಪ್ರಕರಣದಲ್ಲಿ ಶಾಸಕ ಗಣೇಶ್ ವಿರುದ್ಧ ಕೈಗೊಳ್ಳಲಿರುವ ಕ್ರಮ ಹಾಗೂ ಮುಂದಿನ ಬೆಳವಣಿಗೆ ಆಧರಿಸಿ ಕಾದು ನೋಡುವ ತಂತ್ರ ಅನುಸರಿಸಿ ರೂಪಿಸಲು ತೀರ್ಮಾನಿಸಿದೆ. ಹಾಗಾಗಿ ನಾಯಕರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತಿಮಿತಿಯೊಳಗೇ ಮಾತನಾಡುತ್ತಿದ್ದಾರೆ.
ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ ಕುಸಿತಕ್ಕೆ ಪ್ರಯತ್ನ ನಡೆದಿದೆ ಎನ್ನಲಾದ ಸಂದರ್ಭದಲ್ಲಿ ಬಿಜೆಪಿಯೊಂದಿಗೆ ಸಂಪರ್ಕ ಹೊಂದಿರುವ ಕಾಂಗ್ರೆಸ್ ಶಾಸರಕ ಪೈಕಿ ಕಂಪ್ಲಿ ಶಾಸಕ ಗಣೇಶ್ ಹೆಸರು ಸಹ ಕೇಳಿ ಬಂದಿತ್ತು. ಬಿಜೆಪಿಗೆ ಸೇರಲು ಬಯಸಿದ್ದ ಗಣೇಶ್, ಭೀಮಾನಾಯ್ಕ ಅವರ ಚಿಂತನೆ ಬಗ್ಗೆ ಆನಂದ್ ಸಿಂಗ್ ಅವರೇ ಕಾಂಗ್ರೆಸ್ ನಾಯಕರಿಗೆ ಮಾಹಿತಿ ನೀಡಿ ಇಬ್ಬರು ಶಾಸಕರ ಲೆಕ್ಕಾಚಾರವನ್ನು ತಲೆಕೆಳಗಾಗುವಂತೆ ಮಾಡಿದ್ದರು . ಮೂವರು ಶಾಸಕರ ನಡುವೆ ಸಂಘರ್ಷಕ್ಕೆ ಇದೇ ಕಾರಣ ಕೂಡ ಎನ್ನಲಾಗಿದೆ. ಇದರಿಂದಾಗಿಯೇ ಬಿಜೆಪಿಯ ಕಾರ್ಯತಂತ್ರಗಳು ತಲೆಕೆಳಗಾಗಿದ್ದವು.
ಕಾಂಗ್ರೆಸ್ ವಿರುದ್ಧ ಟೀಕೆ: ಹಲ್ಲೆ ಘಟನೆ ಬಹಿರಂಗವಾಗುತ್ತಿದ್ದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಮುಗಿಬಿದ್ದರು. ಕಾಂಗ್ರೆಸ್‌ನ ಗೂಂಡಾ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ವಾಗ್ಧಾಳಿ ನಡೆಸಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಆನಂದ್ ಸಿಂಗ್ ಬಗ್ಗೆ ಸಾಂತ್ವನ ತೋರಿದ್ದರು. ಆದರೆ ಬಹಳಷ್ಟು ನಾಯಕರು ಹಲ್ಲೆ ನಡೆಸಿದ ಆರೋಪ ಹೊತ್ತ ಗಣೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗಟ್ಟಿ ಧ್ವನಿಯಲ್ಲಿ ಆಗ್ರಹ ಮಾಡಲೇ ಇಲ್ಲ. ಬದಲಿಗೆ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿದರು.
ಹಲ್ಲೆ ಘಟನೆ ನಂತರದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದ ಬಿಜೆಪಿಯು ಸದ್ಯ ಪ್ರಕರಣದಿಂದ ಅಂತರ ಕಾಯ್ದುಕೊಳ್ಳಲು ಚಿಂತಿಸಿದೆ. ಗಣೇಶ್ ವಿರುದ್ಧ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಕೈಗೊಳ್ಳುವ ಕ್ರಮ ಆಧರಿಸಿ ಮುಂದಿನ ಹೆಜ್ಜೆ ಇರಿಸಲು ನಿರ್ಧರಿಸಿದೆ. ಗಣೇಶ್‌ನ ನಡೆಯನ್ನೂ ಗಮನಿಸುತ್ತಿರುವ ಬಿಜೆಪಿ ನಾಯಕರು ಪರಿಸ್ಥಿತಿಗೆ ತಕ್ಕೆ ಮುಂದಿನ ಹಿಜ್ಜೆ ಹಿಡಲು ನಿರ್ಧರಿಸಿದ್ದಾರೆ.
ಅಂತರ ಕಾಯ್ದುಕೊಳ್ಳಲು ಬಿಜೆಪಿ ನಿರ್ಧಾರ
•ಪ್ರಕರಣದಲ್ಲಿ ಶಾಸಕ ಗಣೇಶ್ ವಿರುದ್ಧ ಕೈಗೊಳ್ಳಲಿರುವ ಕ್ರಮ, ಮುಂದಿನ ಬೆಳವಣಿಗೆ ಆಧರಿಸಿ ಕಾದು ನೋಡುವ ತಂತ್ರ