Advertisement

ಹೋರಾಟ ಮುಂದುವರಿಸಲು ಬಿಜೆಪಿ ನಿರ್ಧಾರ 

06:00 AM May 30, 2018 | |

ಬೆಂಗಳೂರು: ರೈತರ ಸಾಲ ಮನ್ನಾ ವಿಚಾರದಲ್ಲಿ ಸಮ್ಮಿಶ್ರ ಸರಕಾರ ತೀರ್ಮಾನ ಕೈಗೊಳ್ಳುವವರೆಗೂ ಹೋರಾಟ ಮುಂದುವರಿಸಲು ಬಿಜೆಪಿ ತೀರ್ಮಾನಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕೋರ್‌ ಕಮಿಟಿ ಸಭೆಯಲ್ಲಿ, ರೈತರ ಸಾಲ ಮನ್ನಾ ವಿಚಾರದಲ್ಲಿ ಸರಕಾರದ ಮೇಲೆ ನಿರಂತರ ಒತ್ತಡ ಹಾಕಬೇಕು. ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ಸಹಕಾರಿ ಸಂಘ, ವಾಣಿಜ್ಯ ಬ್ಯಾಂಕ್‌ ಹಾಗೂ ಖಾಸಗಿಯವರಿಂದ ರೈತರು ಪಡೆದಿರುವ ಸಾಲ ಮನ್ನಾ ಮಾಡುವವರೆಗೂ ಹೋರಾಟ ಮುಂದುವರಿಸಬೇಕು ಎಂದು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

Advertisement

ರೈತರ ಸಾಲ ಮನ್ನಾ ವಿಷಯದಲ್ಲಿ ಬುಧವಾರ ಸರಕಾರದ ತೀರ್ಮಾನ ಏನು ಎಂಬುದನ್ನು ನೋಡಿ ಮುಂದಿನ ಹೋರಾಟದ ರೂಪು-ರೇಷೆ ನಿರ್ಧರಿಸೋಣ ಎಂದು ಸಭೆಯಲ್ಲಿ ಯಡಿಯೂರಪ್ಪ ತಿಳಿಸಿದರು ಎನ್ನಲಾಗಿದೆ. ವಿಧಾನಸಭೆ ಚುನಾವಣೆ ಅನಂತರ ಮೊದಲ ಬಾರಿಗೆ ನಡೆದ ಕೋರ್‌ ಕಮಿಟಿ ಸಭೆಯಲ್ಲಿ, ಸರಕಾರ ರಚನೆಗೆ ಅಗತ್ಯವಾದಷ್ಟು ಸೀಟು ಪಡೆಯದ ಬಗ್ಗೆಯೂ ಸುದೀರ್ಘ‌ ಚರ್ಚೆ ನಡೆಯಿತು. ಎಲ್ಲಿ ಲೆಕ್ಕಾಚಾರ ತಪ್ಪಾಯಿತು ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬೆಂಗಳೂರು ಸೇರಿ ಹಳೇ ಮೈಸೂರು ಭಾಗದಲ್ಲಿ ಮತ್ತಷ್ಟು ಶ್ರಮ ವಹಿಸಿದ್ದರೆ ಹೆಚ್ಚು ಸ್ಥಾನ ಗಳಿಸಬಹುದಾಗಿತ್ತು ಎಂಬ ಅಭಿಪ್ರಾಯವನ್ನು ಯಡಿಯೂರಪ್ಪ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.

ವಿಧಾನಪರಿಷತ್‌ನ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಆರು ಸ್ಥಾನಗಳ ಚುನಾವಣೆ, ಜಯನಗರ ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸುವಂತೆ ಮಾಡಬೇಕು. ಆ ಮೂಲಕ ಸಮ್ಮಿಶ್ರ ಸರಕಾರಕ್ಕೆ ತಿರುಗೇಟು ನೀಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

128 ಆಕಾಂಕ್ಷಿಗಳು: ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‌ನ 11 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಐದು ಸ್ಥಾನ ಗೆಲ್ಲುವ ಅವಕಾವಿದ್ದು, 128 ಆಕಾಂಕ್ಷಿಗಳು ಇದ್ದಾರೆ. ಆಕಾಂಕ್ಷಿಗಳ ಪಟ್ಟಿ ಕೇಂದ್ರ ಬಿಜೆಪಿ ಸಮಿತಿಗೆ ಕಳುಹಿಸಿಕೊಡಲಾಗಿದೆ.   ಕೇಂದ್ರ ಚುನಾವಣೆ ಸಮಿತಿಯು ಎಲ್ಲರ ಹೆಸರು ಪರಿಶೀಲಿಸಿ ಐವರ ಹೆಸರು ಅಂತಿಮಗೊಳಿಸಲಿದೆ ಎಂದು ತಿಳಿಸಿದರು. ಕೋರ್‌ ಕಮಿಟಿ ಸಭೆಗೆ ಕೆ.ಎಸ್‌. ಈಶ್ವರಪ್ಪ ಗೈರು ಕುರಿತು ಪ್ರತಿಕ್ರಿಯಿಸಲು  ನಿರಾಕರಿಸಿದರು. ಆದರೆ ಪಕ್ಷದ ನಾಯಕರು, ಕ್ಷೇತ್ರದಲ್ಲಿ ಕೆಲಸವಿದ್ದ ಕಾರಣ ಬರಲಿಲ್ಲ. ಈ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರು ಎಂದು ಸಮಜಾಯಿಷಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next