Advertisement

ಸಿಎಂ ವಿರುದ್ಧ ಬಿಜೆಪಿ ಜನಾಂದೋಲನ

11:51 AM Jan 13, 2018 | Team Udayavani |

ಬೆಂಗಳೂರು: ಆರ್‌ಎಸ್‌ಎಸ್‌ ಮತ್ತು ಬಿಜೆಪಿಯನ್ನು ಉಗ್ರ ಸಂಘಟನೆಗೆ ಹೋಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೇಶಾದ್ಯಂತ ಜನಾಂದೋಲನಾ ಹಾಗೂ ಕಾನೂನು ಹೋರಾಟ ನಡೆಸಲು ವೇದಿಕೆ ಸಿದ್ಧವಾಗಿದೆ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್‌ ಹೇಳಿದರು.

Advertisement

ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಪ್ರಯುಕ್ತ ನಗರದ ಯಡಿಯೂರಿನಲ್ಲಿ ಶುಕ್ರವಾರ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಾವೆಲ್ಲರೂ ಆರ್‌ಎಸ್‌ಎಸ್‌ನ ಸ್ವಯಂಸೇವಕರು ಆರ್‌ಎಸ್‌ಎಸ್‌ನಿಂದ ದೇಶಭಕ್ತಿ, ನಾಡು ಕಟ್ಟುವ ಕಾಯಕ ಹಾಗೂ ವಿವೇಕಾವಾಣಿಯನ್ನು ಕಲಿತಿದ್ದೇವೆ.

ದೇಶದ 19 ರಾಜ್ಯದಲ್ಲಿ ಬಿಜೆಪಿ ಅಡಳಿತ ನಡೆಸುತ್ತಿದ್ದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಸ್ವಯಂಸೇವಕರಾಗಿದ್ದವರು. ರಾಜಕೀಯ ಕೆಸರೆರಚಾಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂವಿಧಾನ ಮತ್ತು ಕಾನೂನನ್ನು ಸ್ಪಷ್ಟವಾಗಿ ಉಲ್ಲಂ ಸಿದ್ದಾರೆ. ಅವರ ಹೇಳಿಕೆ ಶಿಕ್ಷಾರ್ಹ ಅಪರಾಧವಾಗಿದೆ. ಇದರ ವಿರುದ್ಧ ಜನಾಂದೋಲನ ಹಾಗೂ ಕಾನೂನಿನ ಹೋರಾಟ ಮಾಡಲಿದ್ದೇವೆ ಎಂದರು.

ಸಂವಿಧಾನ ಹಾಗೂ ಕಾನೂನು ವಿರೋಧಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಏನಾದರೂ ಪುರಾವೇ ಅಥವಾ ಮಾಹಿತಿ ಇದೆಯೇ? ಉದ್ಧಟತನ ಮತ್ತು ಆಹಂಕಾರದಿಂದ ಹೀಗೆ ಹೇಳಿದ್ದಾರೆ. ನಾಡಿನ ಜನತೆ ಸಿಡಿದೆದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟಕಟೆ ಏರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ಮುಖ್ಯಮಂತ್ರಿಯಾಗಿ ಸಂವಿಧಾನದ ಅಡಿಯಲ್ಲಿ ಹೇಗೆ ಕೆಲಸ ಮಾಡಬೇಕು ಎಂಬುದು  ಅವರಿಗೆ ತಿಳಿದಿಲ್ಲ. ಅಹಂಕಾರ ಮತ್ತು ಉದ್ಧಟತನ ಮೀರಿ ಹೋಗಿದ್ದಾರೆ. ದೇಶದ ಎಲ್ಲಾ ರಾಜ್ಯದಲ್ಲೂ ಕಾಂಗ್ರೆಸ್‌ ಶಕ್ತಿ ಕಳೆದುಕೊಳ್ಳುತ್ತಿರುವ ಬಗ್ಗೆ ನಾಚಿಕೆ, ಪಶ್ಚಾತಾಪ ಅವರಿಗೆ ಇಲ್ಲ. ಅವಿವೇಕದಿಂದ ಸಮಾಜ ಒಡೆಯುವ ಹೇಳಿಕೆ ನೀಡುವುದನ್ನು ಬಿಟ್ಟು ಆತ್ಮ ವಂಚನೆ ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.

Advertisement

ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಉಗ್ರವಾದಿಗಳು ಎಂದು ಹೇಳಿಕೆ ನೀಡಿರುವ ನೀವು ಅವರ  ಮೇಲೆ ಕ್ರಮ ತೆಗೆದುಕೊಂಡಿಲ್ಲ ಏಕೆ? ಮುಖ್ಯಮಂತ್ರಿಯಾಗಿ ನೀವೇನು ಮಾಡುತ್ತಿದ್ದಿರಿ? ಪಿಎಫ್ಐ, ಎಸ್‌ಡಿಪಿಐ ಮೊದಲಾದ ಸಂಘಟನೆಗಳ ಕಾರ್ಯಕರ್ತರ ಮೇಲಿರುವ ಕೇಸಿನ ವಿಚಾರಣೆ ಮಾಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.

ಚುನಾವಣಾ ಆಯೋಗದಿಂದ ಮಾನ್ಯತೆ ಪಡೆದ ದೇಶದ 19 ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ರಾಷ್ಟ್ರೀಯ ರಾಜಕೀಯ ಪಕ್ಷದ ಮೇಲೆ ಹಾಗೂ ನಿವೃತ್ತ ನ್ಯಾಯಮೂರ್ತಿಗಳೇ ದೇಶಭಕ್ತ ಸಂಘಟನೆ ಎಂದು ಬಣ್ಣಿಸಿದ ಆರ್‌ಎಸ್‌ಎಸ್‌ ವಿರುದ್ಧ ಈ ರೀತಿ ಮಾತನಾಡಿರುವುದನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಖಡಕ್‌ ಉತ್ತರ ನೀಡಿದರು. ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಸೇರಿ ಅನೇಕರು ಉಪಸ್ಥಿತರಿದ್ದರು.

ಬಿಜೆಪಿ ಮಹದಾಯಿ ಹೋರಾಟದ ಪರ: ಬಿಜೆಪಿ ಮಹದಾಯಿ ಹೋರಾಟದ ಪರವಾಗಿದೆ. ವಿವಾದ ಈಗ ನ್ಯಾಯಮಂಡಳಿಯ ಮುಂದಿದೆ. ಇಷ್ಟಾದರೂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಗೋವಾ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಅವರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುತ್ಸದ್ದಿತನ ತೋರಬೇಕು. ಮಾಜಿ ಮುಖ್ಯಮಂತ್ರಿಗಳಾದ ಎಸ್‌.ಎಂ.ಕೃಷ್ಣ, ಜೆ.ಎಚ್‌.ಪಾಟೀಲ್‌ರಂತೆ ಕಾರ್ಯ ನಿರ್ವಹಿಸಬೇಕಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಂಕಾರವನ್ನೇ ತುಂಬಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಅನಂತ ಕುಮಾರ್‌ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next