ಇಂಫಾಲ್: ಎನ್. ಬಿರೇನ್ ಸಿಂಗ್ ನೇತೃತ್ವದ ಮಣಿಪುರ ಬಿಜೆಪಿ ಸರ್ಕಾರ ಕೊನೆಗೂ ಸೋಮವಾರ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ 32 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದೆ.
60 ಸದಸ್ಯ ಬಲದ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 21 ಸ್ಥಾನ ಗಳಿಸಿದ್ದು 2ನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಬಹುಮತ ಸಾಬೀತಿಗೆ ಇನ್ನೂ 10 ಸದಸ್ಯರ ಬೆಂಬಲದ ಅಗತ್ಯವಿತ್ತು.
ಕಾಂಗ್ರೆಸ್ ಪಕ್ಷ 28 ಸ್ಥಾನಗಳಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿತ್ತು. ಆದರೆ ಬಹುಮತಕ್ಕೆ ಬೇಕಾಗಿದ್ದ 3 ಸದಸ್ಯರ ಬೆಂಬಲ ಪಡೆಯುವಲ್ಲಿ ವಿಫಲವಾಗುವ ಮೂಲಕ ಅಧಿಕಾರದ ಗದ್ದುಗೆ ಏರುವ ಕನಸು ಭಗ್ನಗೊಂಡಂತಾಗಿದೆ.
21 ಸ್ಥಾನ ಪಡೆದಿದ್ದ ಭಾರತೀಯ ಜನತಾ ಪಕ್ಷಕ್ಕೆ ಸ್ಥಳೀಯ ಪಕ್ಷವಾದ ನಾಗಾ ಪೀಪಲ್ಸ್ ಫ್ರಂಟ್, ನ್ಯಾಷನಲ್ ಪೀಪಲ್ಸ್ ಪಾರ್ಟಿ, ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದ ಲೋಕ್ ಜನಶಕ್ತಿ ಪಕ್ಷದ ಶಾಸಕರು ಬೆಂಬಲ ನೀಡಿದ್ದು, ಇದರಿಂದ ಮಣಿಪುರದಲ್ಲೂ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ.
ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಮಾಜಿ ಫುಟ್ಬಾಲ್ ಆಟಗಾರ, ಕಾಂಗ್ರೆಸ್ ತ್ಯಜಿಸಿದ್ದ ಬಿರೇನ್ 2016ರ ಅಕ್ಟೋಬರ್ ನಲ್ಲಿ ಬಿಜೆಪಿ ಪಾಳಯಕ್ಕೆ ಸೇರ್ಪಡೆಗೊಂಡಿದ್ದರು. ಬಿರೇನ್ ಸಿಂಗ್ ನೂತನ ಸಿಎಂ ಆಗಿ ಮಾ.15ರಂದು ಪ್ರಮಾಣವಚನ ಸ್ವೀಕರಿಸಿದ್ದರು.