ಗಾಂಧಿನಗರ : ಗುಜರಾತ್ ನಲ್ಲಿ ಬಿಜೆಪಿ ಭರ್ಜರಿ ಬಹುಮತ ಪಡೆಯುವುದು ಖಚಿತವಾಗುತ್ತಿದ್ದಂತೆ ಭೂಪೇಂದ್ರ ಪಟೇಲ್ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರಕ್ಕೆ ಮುಹೂರ್ತ ನಿಗದಿ ಮಾಡಲಾಗಿದೆ.
ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್ ಅವರು ಈ ಬಗ್ಗೆ ವಿವರಗಳನ್ನು ನೀಡಿದ್ದು, ಡಿಸೆಂಬರ್ 12 ರಂದು ಮಧ್ಯಾಹ್ನ 2 ಗಂಟೆಗೆ ಗುಜರಾತ್ ಸಿಎಂ ಆಗಿ ಮಗದೊಮ್ಮೆ ಭೂಪೇಂದ್ರ ಪಟೇಲ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಪಟೇಲ್ ಅವರು ಸ್ವಕ್ಷೇತ್ರ ಘಟ್ಲೋಡಿಯಾದಿಂದ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
60 ರ ಹರೆಯದ ಭೂಪೇಂದ್ರಭಾಯಿ ಪಟೇಲ್ ಅವರು ಏಪ್ರಿಲ್ 1982 ರಲ್ಲಿ ಅಹಮದಾಬಾದ್‌ನ ಸರ್ಕಾರಿ ಪಾಲಿಟೆಕ್ನಿಕ್‌ನಿಂದ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪದವಿ ಪಡೆಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನಲೆಯಿಂದ ಬಂದ ನಾಯಕರಾಗಿದ್ದಾರೆ.
2021 ರ ಸೆಪ್ಟೆಂಬರ್ 11 ರಂದು ವಿಜಯ್ ರೂಪಾನಿ ಅವರು ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ 12 ಸೆಪ್ಟೆಂಬರ್ 2021 ರಂದು ಗಾಂಧಿನಗರದಲ್ಲಿ ನಡೆದ ಪಕ್ಷದ ಶಾಸಕಾಂಗ ಸಭೆಯಲ್ಲಿ ಪಟೇಲ್ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಮತ್ತು ಗುಜರಾತ್ ಮುಖ್ಯಮಂತ್ರಿಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. 2021 ಸೆಪ್ಟೆಂಬರ್ 13 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಗುಜರಾತ್ ನಲ್ಲಿ 182 ಸ್ಥಾನಗಳ ಪೈಕಿ ಬಿಜೆಪಿ 153 ಸ್ಥಾನಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ. (58 ರಲ್ಲಿ ಜಯ)