Advertisement
ಉತ್ತರ ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳ ಅನುಷ್ಠಾನ ಅಗತ್ಯದ ಸನ್ನಿವೇಶ ಸಜ್ಜುಗೊಂಡಿದೆ. ಉಕದಿಂದಲೇ ಹೆಚ್ಚಿನ ರಾಜಕೀಯ ಬಲ ಪಡೆದಿರುವ ಬಿಜೆಪಿ, ಈ ಭಾಗದ ಅಭಿವೃದ್ಧಿ ನಿಟ್ಟಿನಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ.
Related Articles
Advertisement
ಕಳಸಾ-ಬಂಡೂರಿ ಜವಾಬ್ದಾರಿ: ಮಹದಾಯಿ, ಕಳಸಾ-ಬಂಡೂರಿ ಯೋಜನೆಗೂ ಬಿಜೆಪಿಗೂ ಒಂದು ರೀತಿಯ ಅವಿನಾಭಾವ ಸಂಬಂಧವಿದೆ. ಕಳಸಾ-ಬಂಡೂರಿ ಯೋಜನೆಗಾಗಿ ಈ ಹಿಂದೆ ಅನೇಕ ಬಿಜೆಪಿ ನಾಯಕರು ಪಾದಯಾತ್ರೆ, ರಕ್ತದಲ್ಲಿ ಪತ್ರ ಇನ್ನಿತರ ರೀತಿಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್ ಸರ್ಕಾರ ಕಳಸಾ-ಬಂಡೂರಿ ಯೋಜನೆ ಘೋಷಣೆ ಮಾಡಿತ್ತಾದರೂ, ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸುಮಾರು 100 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ಆರಂಭಕ್ಕೆ ಚಾಲನೆ ನೀಡಲಾಗಿತ್ತು.
ಈ ಹಿಂದೆ ಮಹದಾಯಿ, ಕಳಸಾ-ಬಂಡೂರಿ ವಿಚಾರ ಬಂದಾಗಲೆಲ್ಲ ಪ್ರಕರಣ ನ್ಯಾಯಾಧಿಕರಣದಲ್ಲಿದೆ ಎಂಬ ಸಬೂಬು ನೀಡಲಾಗುತ್ತಿತ್ತು. ಇದೀಗ ನ್ಯಾಯಾಧಿಕರಣ ತೀರ್ಪು ನೀಡಿ ರಾಜ್ಯಕ್ಕೆ ಸುಮಾರು 13.5 ಟಿಎಂಸಿ ಅಡಿಯಷ್ಟು ನೀರನ್ನು ಹಂಚಿಕೆ ಮಾಡಿದೆ. ಕಳಸಾ-ಬಂಡೂರಿ ಯೋಜನೆ ನಿಟ್ಟಿನಲ್ಲಿ ಹಾಗೂ ನ್ಯಾಯಾಧಿಕರಣ ಹಂಚಿಕೆ ಮಾಡಿದ ನೀರು ಬಳಕೆಗೆ ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧಗೊಂಡಿದ್ದು, ಅಂದಾಜು 1,000-1,400 ಕೋಟಿ ರೂ. ಹಣ ಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಮಹದಾಯಿ ನ್ಯಾಯಧಿಕರಣ ತೀರ್ಪಿನಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕಾಗಿದೆ. ಜತೆಗೆ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಬೇಕಾಗಿದೆ.
ಇದೀಗ ಕರ್ನಾಟಕ, ಗೋವಾ, ಮಹಾರಾಷ್ಟ್ರ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳಿದ್ದು, ಪ್ರಧಾನಿಯವರೇ ಮುಂದಾಗಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸೌಹಾರ್ದ ಪರಿಹಾರಕ್ಕೆ ಮಹತ್ವದ ಯತ್ನ ಕೈಗೊಳ್ಳಬೇಕಾಗಿದೆ. ಮಹದಾಯಿ ವಿಚಾರದಲ್ಲಿ ಬಿಜೆಪಿಯವರು ಸೂಕ್ತವಾಗಿ ಸ್ಪಂದಿಲ್ಲ ಎಂಬ ಜನರ ಭಾವನೆ, ಅಸಮಾಧಾನ ಇಲ್ಲವಾಗಿಸಲು ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ.
ಸಮಾನಾಂತರ ಜಲಾಶಯ: ತುಂಗಭದ್ರ ಜಲಾಶಯದಲ್ಲಿ ಸುಮಾರು 33-34 ಟಿಎಂಸಿ ಅಡಿಯಷ್ಟು ಹೂಳು ಶೇಖರಣೆ ಆಗಿರುವುದರಿಂದ ನೀರು ಸಂಗ್ರಹ ಕಡಿಮೆಯಾಗಿ ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ರೈತರಿಗೆ ಒಂದೇ ಬೆಳೆಗೆ ನೀರು ಎನ್ನುವಂತಾಗಿದೆ. ಕುಡಿಯುವ ನೀರಿನ ಸಮಸ್ಯೆಯೂ ಅಧಿಕವಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ನವಲಿ ಬಳಿ ನಿರ್ಮಿಸಲು ಉದ್ದೇಶಿಸಿರುವ ಅಂದಾಜು 5,600 ಕೋಟಿ ರೂ.ವೆಚ್ಚದ, ಸುಮಾರು 35 ಟಿಎಂಸಿ ಅಡಿ ನೀರು ಸಂಗ್ರಹದ ಸಮಾನಾಂತರ ಜಲಾಶಯ ಯೋಜನೆ ಅನುಷ್ಠಾನಕ್ಕೆ ಬಿಜೆಪಿ ಸರ್ಕಾರ ಮುಂದಾಗಬೇಕಾಗಿದೆ.
ಉತ್ತರ ಕರ್ನಾಟಕದಲ್ಲಿ ಕೆರೆಗಳಿಗೆ ನೀರು ತುಂಬುವ ಯೋಜನೆಗೆ ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಚಾಲನೆ ನೀಡಲಾಗಿತ್ತು. ಈ ಯೋಜನೆ ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಒಂದಿಷ್ಟು ಅನುಷ್ಠಾನಗೊಂಡಿದ್ದು ಬಿಟ್ಟರೆ, ಇತರೆ ಜಿಲ್ಲೆಗಳಲ್ಲಿ ಇದು ಪರಿಣಾಮಕಾರಿಯಾಗಿಲ್ಲ. ಈ ಯೋಜನೆಗೆ ಒತ್ತು ನೀಡಬೇಕಾಗಿದೆ. ಪ್ರಗತಿ ಹಣೆಪಟ್ಟಿ ಹೊತ್ತಿರುವ, ಕಡತದಲ್ಲೇ ಕೊಳೆಯುತ್ತಿರುವ ಈ ಭಾಗದ ಅನೇಕ ಏತ ನೀರಾವರಿ ಯೋಜನೆಗಳಿಗೆ ಮೋಕ್ಷ ಕಾಣಿಸಬೇಕಾಗಿದೆ.
ಕಚೇರಿ ಸ್ಥಳಾಂತರ ಸವಾಲು: ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣ ಹಾಗೂ ಉದ್ಘಾಟನೆ ಶ್ರೇಯಸ್ಸು ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಅದರ ಸದ್ಬಳಕೆ ನಿಟ್ಟಿನಲ್ಲಿ ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ವಿವಿಧ ಕಚೇರಿಗಳನ್ನು ಸ್ಥಳಾಂತರಿಸುವುದಾಗಿ ಹೇಳಿದ್ದರು. ಇದೀಗ ಅವರದ್ದೇ ಸರ್ಕಾರ ಇದ್ದು, ಪ್ರಮುಖ 18 ಇಲಾಖೆಗಳನ್ನು ಈ ಭಾಗಕ್ಕೆ ಸ್ಥಳಾಂತರಿಸಬೇಕಾಗಿದೆ.
ಹೈದರಾಬಾದ ಕರ್ನಾಟಕ ಭಾಗಕ್ಕೆ 371(ಜೆ)ಕಲಂ ನಡಿ ವಿಶೇಷ ಸೌಲಭ್ಯ ನೀಡಲಾಗಿದೆಯಾದರೂ ಅಗತ್ಯ ಹಣ ನೀಡಿಕೆ, ನೀಡಿದ ಹಣದ ಸಮರ್ಪಕ ಬಳಕೆ ಇಲ್ಲವಾಗುತ್ತಿದೆ. ಸೌಲಭ್ಯದ ಅನುಷ್ಠಾನ ನಿಟ್ಟಿನಲ್ಲಿ ಪ್ರತ್ಯೇಕ ಎಂಜಿನಿಯರಿಂಗ್ ವಿಭಾಗ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತು ನೀಡಬೇಕಾಗಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಪಿಂಚಣಿ ಬಾಕಿ ಹಣವಾಗಿ ಸುಮಾರು 121 ಕೋಟಿ ರೂ. ಬಾಕಿ ಬರಬೇಕಾಗಿದೆ. ಇದಕ್ಕಾಗಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಿಜೆಪಿ ವಿವಿಧ ಹಂತದ ಹೋರಾಟ ಮಾಡಿತ್ತು. ನಿಯೋಗ ತೆರಳಿತ್ತು. ಸದನದಲ್ಲಿ ವಿಷಯ ಪ್ರಸ್ತಾಪಿಸಿತ್ತು. ಇದೀಗ ಬಿಜೆಪಿಯೇ ಅಧಿಕಾರಕ್ಕೆ ಬಂದಿದ್ದು, 121 ಕೋಟಿ ರೂ. ಪಿಂಚಣಿ ಬಾಕಿ ಹಣವನ್ನು ಪಾಲಿಕೆಗೆ ಬಿಡುಗಡೆ ಮಾಡುವ ಜವಾಬ್ದಾರಿತನ ತೋರಬೇಕಾಗಿದೆ.
•ಅಮರೇಗೌಡ ಗೋನವಾರ