ಸಿಂದಗಿ: ಶೋಷಿತ ವರ್ಗದವರನ್ನು, ರೈತರನ್ನು, ಹಿಂದುಳಿದ ವರ್ಗದವರನ್ನು, ದೀನ-ದಲಿತರನ್ನು ಮೇಲಕ್ಕೆತ್ತುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವಂತ ಕಾರ್ಯ ಮಾಡುವುದು ಬಿಜೆಪಿ ಮುಖ್ಯ ಉದ್ದೇಶವಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.
ಬುಧವಾರ ಪಟ್ಟಣದಲ್ಲಿ ಉಪಚುನಾವಣೆ ನಿಮಿತ್ತ ಪಕ್ಷದ ಅಭ್ಯರ್ಥಿ ರಮೇಶ ಭೂಸನೂರ ಪ್ರಚಾರ ನಿಮಿತ್ತ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ತಮ್ಮ 7 ವರ್ಷದ ಅಧಿಕಾರದ ಅವಧಿಯಲ್ಲಿ ಶೋಷಿತ ವರ್ಗದವರಿಗೆ, ರೈತರಿಗೆ, ದೀನ-ದಲಿತರ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದರು.
ರೈತರಿಗೆ ಕೇಂದ್ರ ಸರಕಾರ ಆರು ಸಾವಿರ, ರಾಜ್ಯ ಸರಕಾರ ನಾಲ್ಕು ಸಾವಿರ ಒಟ್ಟು ಹತ್ತು ಸಾವಿರ ಸಹಾಯಧನ ನಿಡಲಾಗುತ್ತಿದೆ. ಇದು ರೈತರಿಗೆ ಪಿಂಚಣಿ ನೀಡುವಂತೆ ಕೊಡುವ ಕಾರ್ಯಕ್ರಮವಾಗಿದೆ. ಹನಿ ನೀರಾವರಿಗೆ ಆದ್ಯತೆ ನೀಡಿದ್ದಾರೆ. ಹೀಗೆ ಹಿಂದಿನ ಯಾವ ಸರಕಾರ ಮಾಡದಂತಹ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಈ ಕಾರ್ಯಕ್ರಮಗಳನ್ನು ಜನತೆ ಮೆಚ್ಚಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಆದ್ದರಿಂದ ಈ ಉಪಚುನಾವಣೆಯಲ್ಲಿ ಪಕ್ಷದಿಂಧ ಸ್ಪರ್ಧಿಸಿದ ರಮೇಶ ಭೂಸನೂರ ಅವರನ್ನು ಬಹುಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈ ಬಲಪಡಿಸಬೇಕು ಎಂದು ಹೇಳಿದರು.
ಬಿಜೆಪಿ ಶೋಷಿತ ವರ್ಗದವರ ಚಿಂತನೆ ಮಾಡುತ್ತದೆ. ತಳವಾರ, ಪರಿವಾರ ಸಮಾಜಕ್ಕೆ ಸಂಬಂಧಿಸಿದಂತೆ ಮೀಸಲಾತಿ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಸಂದರ್ಭದಲ್ಲಿ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಈ ವಿಷಯ ಬೇಡ ಎಂದಿದ್ದೇನೆ ಹೊರತು ಯಾವ ಉದ್ಧೇಶವಿಲ್ಲ.
ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅನವಶ್ಯಕವಾಗಿ ಗೊಂದಲ ಹಿಡಿಸಿದವು. ನಾನು ಯಾವಾಗಲು ಶೋಷಿತ ವರ್ಗದವರ ಪರ. ಹಿಂದೆ ಕೆ.ಬಿ. ಚೌಧರಿ ಸಂಸದರಿದ್ದ ಸಂದರ್ಭದಲ್ಲಿ, ಸಿಂದಗಿ ಕ್ಷೇತ್ರದಿಂದ ಡಾ| ಆರ್.ಬಿ. ಚೌಧರಿ ಅವರು ಸಚಿವರಿದ್ದ ಸಂದರ್ಭದಲ್ಲಿ ಏನೂ ಮಾಡಲಿಲ್ಲ. ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಅಂಬಿಗೇರ ಚೌಡಯ್ಯ, ಶಿವಾಜಿ ಜಯಂತಿ ಹೀಗೆ ಅನೇಕ ಜಯಂತಿಗಳನ್ನು ಸರಕಾರ ಮಟ್ಟದಲ್ಲಿ ಆಚರಿಸುವಂತೆ ಮಾಡಿದ್ದೇನೆ ಎಂದು ಹೇಳಿದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಸಿಂದಗಿ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ರಮೇಶ ಭೂಸನೂರ ಅವರನ್ನು ಬಹುಮತದಿಂದ ಚುನಾಯಿಸಿ ತರಬೇಕು ಎಂದು ಮನವಿ ಮಾಡಿಕೊಂಡರು. ಬಿಜೆಪಿ ಯುವ ಮುಖಂಡ ಸಿದ್ದು ಬಿರಾದಾರ ಅಡಕಿ, ಜಿಲ್ಲಾ ವಕ್ತಾರ ರಾಜಶೇಖರ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗೂರ, ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಸುದರ್ಶನ ಜಿಂಗಾಣಿ, ಶಿವಕುಮಾರ ಬಿರಾದಾರ, ಗುರು ತಳವಾರ ಪತ್ರಿಕಾಗೋಷ್ಠಿಯಲ್ಲಿದ್ದರು.