ಬೆಳಗಾವಿ: ಜನರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಇದನ್ನು ನೋಡಿದ ಬಿಜೆಪಿಗೆ ಆತಂಕ ಶುರುವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಜಾರಿಗೆ ತಂದ ಘೋಷಣೆಗಳನ್ನು ಜನರು ಹೃದಯಪೂರ್ವಕವಾಗಿ ಸ್ವಾಗತ ಮಾಡುತ್ತಿದ್ದಾರೆ. ಈ ವಿಷಯನ್ನು ಮರೆ ಮಾಚಲು ಬಿಜೆಪಿಯವರು ಬೇರೆ ಅಸ್ತ್ರ ಹೂಡುತ್ತಿದ್ದಾರೆ. ಇವರ ಬಯಕೆ ಎಂದೂ ಈಡೇರದು ಎಂದು ತಿರುಗೇಟು ನೀಡಿದರು.
ಅಭಿವೃದ್ದಿ ಬಗ್ಗೆ ಬಿಜೆಪಿಯವರಿಗೆ ಏನೂ ಗೊತ್ತಿಲ್ಲ. ಅವರಿಗೆ ಗೊತ್ತಿರುವುದು ಕೇವಲ ಕೋಮು ಗಲಭೆ ಹಾಗೂ ಗಲಾಟೆ ಮಾಡಿಸುವುದು. ಇದು ಅವರ ನಿತ್ಯ ಕಾಯಕವಾಗಿದೆ. ಸೋತು ಸುಣ್ಣವಾಗಿರುವ ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಆದ್ದರಿಂದ ಇಂತಹ ಇಲ್ಲ ಸಲ್ಲದ ಹೇಳಿಕೆಗಳ ಮೂಲಕ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
Related Articles
ಬೆಳಗಾವಿಗೆ ಬರಬೇಕಿದ್ದ ಯೋಜನೆಗಳು ಹುಬ್ಬಳ್ಳಿ ಧಾರವಾಡಕ್ಕೆ ಹೋಗುತ್ತಿವೆ ಎನ್ನುವ ಆರೋಪಕ್ಕೆ ಉತ್ತರಿಸಿದ ಅವರು, ನಮ್ಮ ಎಲ್ಲ ವಿಮಾನಗಳು ಹುಬ್ಬಳ್ಳಿಗೆ ಹೋಗಿವೆ. ದೆಹಲಿಗೆ ಸಾಕಷ್ಟು ಜನ ಪ್ರಯಾಣ ಬೆಳೆಸುತ್ತಿದ್ದರು. ಆದರೆ ಬಿಜೆಪಿಯ ಮಂತ್ರಿಗಳು ಇಲ್ಲಿಗೆ ಬರುವ ವಿಮಾನ ಹುಬ್ಬಳ್ಳಿಗೆ ಹೋಗಲು ಕಾರಣರಾಗಿದ್ದಾರೆ. ಮುಂದಿನ ದಿನಗಳಲ್ಲಿ ಬೆಳಗಾವಿಯಲ್ಲಿ ಇನ್ನೂ ಹೆಚ್ಚಿನ ವಿಮಾನ ತರುವ ಪ್ರಯತ್ನ ಮಾಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಸಭೆ ಕರೆಯಲಾಗುವುದು ಎಂದರು.
ಎಮ್ಮೆ, ಕೋಣ ಕಡಿಯುವುದಾದರೆ ಹಸು ಏಕೆ ಕಡಿಯಬಾರದು ಎಂದು ಪಶುಸಂಗೋಪನಾ ಇಲಾಖೆಯ ಸಚಿವ ವೆಂಕಟೇಶ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ಇನ್ನು ಐದು ವರ್ಷ ಏನೂ ಕೆಲಸ ಇಲ್ಲ. ಅವರು ಐದು ವರ್ಷ ಹೋರಾಟ ಮಾಡುತ್ತಲೇ ಇರಬೇಕು ಬಿಜೆಪಿಯವರು ಬೋರ್ಡ್ ಬರೆದು ಇಡಬೇಕು ಇನ್ನು ಹೋರಾಟ. ಹೋರಾಟ, ಗೆಲ್ಲುವವರೆಗೂ ಹೋರಾಟ ಅಂತ. ಇದು ಅವರ ಕೆಲಸ ಎಂದು ಸತೀಶ್ ಜಾರಕಿಹೊಳಿ ವ್ಯಂಗವಾಡಿದರು. ಏನೇ ಇದ್ದರೂ ಸದನದಲ್ಲಿ ಚರ್ಚೆಗೆ ಅವಕಾಶ ಇದೆ. ಸಚಿವ ವೆಂಕಟೇಶ ಅವರ ಹೇಳಿಕೆ ಕುರಿತು ಚರ್ಚೆಗೆ ಅವಕಾಶ ಇದೆ. ಸಾಧಕ, ಬಾಧಕ ನೋಡಿ ನಿರ್ಣಯವಾಗುತ್ತದೆ. ಸದ್ಯ ಬಿಜೆಪಿ ವಿರೋಧ ಪಕ್ಷದಲ್ಲಿದ್ದುಕೊಂಡು ಒಳ್ಳೆಯ ಕೆಲಸ ಮಾಡಲಿ. ಅವರ ಸರಕಾರದ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಅವರಿಗೆ ಯಾರೇ ಏನಂದರೂ ಗುರಿಯಾಗಿಟ್ಟುಕೊಂಡು ವಿರೋಧ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಒಡಿಶಾ ರೈಲು ದುರಂತಕ್ಕೆ ಸಂತಾಪ: ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ 230ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಮೃತರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂತಾಪ ವ್ಯಕ್ತಪಡಿಸಿದ ಸಚಿವರು ದುರಂತಕ್ಕೆ ಸಿಲುಕಿದ ರೈಲಿನಲ್ಲಿ ಮೃತಪಟ್ಟ ಪ್ರಯಾಣಿಕರ ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಹಾಗೂ ಈ ಘಟನೆಯಲ್ಲಿ ಬದುಕುಳಿದ ಕನ್ನಡಿಗರನ್ನು ರಕ್ಷಿಸಿ ರಾಜ್ಯಕ್ಕೆ ಕರೆ ತರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.