ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿಯನ್ನು ಪುನರ್ ಸ್ಥಾಪಿಸುವವರೆಗೆ ತ್ರಿವರ್ಣ ಧ್ವಜ ಹಾರಿಸುವುದಿಲ್ಲ ಎಂದು ಪೀಪಲ್ಸ್ ಡೆಮೊಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು. ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಗುಂಪೊಂದು ಜಮ್ಮುವಿನ ಗಾಂಧಿ ನಗರದಲ್ಲಿರುವ ಪಿಡಿಪಿ ಕಚೇರಿಯೊಳಗೆ ನುಗ್ಗಿ ತ್ರಿವರ್ಣ ಧ್ವಜ ಹಾರಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಜಮ್ಮು-ಕಾಶ್ಮೀರದ ಈ ಹಿಂದಿನ ರಾಜ್ಯ ಧ್ವಜಕ್ಕೆ ಮರಳಿ ಸ್ಥಾನಮಾನ ಸಿಗುವವರೆಗೂ ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸುವುದಿಲ್ಲ ಎಂದು ಮೆಹಬೂಬಾ ಮುಫ್ತಿ ನೀಡಿದ್ದ ಹೇಳಿಕೆ ತೀವ್ರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿತ್ತು.
ತ್ರಿವರ್ಣ ಧ್ವಜ ಹಾರಿಸಿದ ವ್ಯಕ್ತಿಯ ಜತೆ ಪಿಡಿಪಿಯ ಇಬ್ಬರು ವಾಗ್ವಾದಕ್ಕೆ ಇಳಿದಿದ್ದು, ಏತನ್ಮಧ್ಯೆ ಪೊಲೀಸರು ಮಧ್ಯೆ ಪ್ರವೇಶಿಸಿ ಗುಂಪನ್ನು ಚದುರಿಸಿದ್ದರು. ಅಲ್ಲದೇ ರಾಷ್ಟ್ರಧ್ವಜವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕೇಂದ್ರದ ವಿರುದ್ಧ ಜಮ್ಮು-ಕಾಶ್ಮೀರದ 6 ಪಕ್ಷಗಳ ಮೈತ್ರಿ ಹೋರಾಟ;ಏನಿದು ಗುಪ್ಕಾರ್ ಡಿಕ್ಲರೇಷನ್?
ಶ್ರೀನಗರದ ಲಾಲ್ ಚೌಕ್ ನಲ್ಲಿಯೂ ಬಿಜೆಪಿ ಕಾರ್ಯಕರ್ತರು ರಾಷ್ಟ್ರಧ್ವಜ ಹಾರಿಸಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಪೊಲೀಸರು ಹಲವು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿರುವುದಾಗಿ ಎಎನ್ ಐ ವರದಿ ಮಾಡಿದೆ. ನಗರದಲ್ಲಿ ತ್ರಿವರ್ಣ ಧ್ವಜ ಹಾರಿಸಲು ಯತ್ನಿಸಿದ್ದ ಬಿಜೆಪಿ ಕಾರ್ಯಕರ್ತರು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದರು.
ಜಮ್ಮು-ಕಾಶ್ಮೀರದಲ್ಲಿ 370 ವಿಧಿಯನ್ನು ಮರಳಿ ಜಾರಿಗೊಳಿಸುವವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮೆಹಬೂಬಾ ಮುಫ್ತಿ ಘೋಷಿಸಿದ್ದು, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ಆಗಸ್ಟ್ ತಿಂಗಳಿನಲ್ಲಿ ಮುಫ್ತಿಯನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು.
ಬರೋಬ್ಬರಿ 14 ತಿಂಗಳ ಗೃಹ ಬಂಧನದ ನಂತರ ಇತ್ತೀಚೆಗಷ್ಟೇ ಮೆಹಬೂಬಾ ಮುಫ್ತಿಯನ್ನು ಬಿಡುಗಡೆಗೊಳಿಸಲಾಗಿತ್ತು. ಗೃಹ ಬಂಧನದಿಂದ ಬಿಡುಗಡೆಗೊಂಡ ನಂತರ 370ನೇ ವಿಧಿ ಮರಳಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಆರು ಪಕ್ಷಗಳು ಒಗ್ಗೂಡಿ ಮೈತ್ರಿ ಕೂಟ ರಚಿಸಿಕೊಂಡಿವೆ ಎಂದು ವರದಿ ತಿಳಿಸಿದೆ.