ಬೆಂಗಳೂರು: ಕರ್ನಾಟಕ ಸೇರಿ ದೇಶಾದ್ಯಂತ ಬಿಜೆಪಿ ಅಭೂತಪೂರ್ವ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ಮನೆ ಮಾಡಿತ್ತು. ಪಕ್ಷದ ಹುರಿಯಾಳುಗಳ ಭವಿಷ್ಯ ಪ್ರಕಟವಾಗುತ್ತಿದ್ದಂತೆ ಸಾವಿರಾರು ಕಾರ್ಯಕರ್ತರು ಪಕ್ಷದ ಕಚೇರಿ ಬಳಿ ಧಾವಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಕಚೇರಿ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ವಾದ್ಯದೊಂದಿಗೆ ಹೆಜ್ಜಿ ಹಾಕಿದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಭಾವಚಿತ್ರ ಹಿಡಿದು ಜೈಕಾರ ಹಾಕಿದರು.
ಮಧ್ಯಾಹ್ನದ ವೇಳೆಗೆ ಆಗಮಿಸಿದ ಮಾಜಿ ಉಪಮುಖ್ಯಮಂತ್ರಿ, ಶಾಸಕ ಆರ್.ಅಶೋಕ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾರ್ಯಕರ್ತರ ಜತೆ ಗೆಲುವಿನ ಹಬ್ಬ ಆಚರಿಸಿದರು. ಈ ವೇಳೆ ಶಾಸಕ ಆರ್.ಅಶೋಕ್, ದೇಶಾದ್ಯಂತ ಮತ್ತೂಮ್ಮೆ ಮೋದಿ ಅವರನ್ನು ಆಯ್ಕೆ ಮಾಡಿರುವುದಕ್ಕೆ ಮತದಾರನಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದು, ಒಮ್ಮೆಲೆ ಹತ್ತಾರು ಲಾಡುಗಳನ್ನು ಹಿಡಿದು ತಿನ್ನಲು ಮುಂದಾದರು.
ಅನಂತರ ಕಚೇರಿಗೆ ಆಗಮಿಸಿದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಪುತ್ರ ವಿಜಯೇಂದ್ರ ಅವರಿಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹಾಗೂ ವಿಧಾನಪರಿಷತ್ ಸದಸ್ಯ ಲೆಹರ್ ಸಿಂಗ್ ಪರಸ್ಪರ ಸಿಹಿ ತಿನ್ನಿಸಿ ಶುಭಾಶಯ ಕೋರಿದರು. ಸಂಜೆ ವೇಳೆಗೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್, ಉತ್ತರ ಕ್ಷೇತ್ರದ ಡಿ.ವಿ.ಸದಾನಂದಗೌಡ ಆಗಮಿಸಿದರು.
ಕುಣಿದು ಕುಪ್ಪಳಿಸಿದ ಕಾರ್ಯಕರ್ತರು: ಕಾರ್ಯಕರ್ತರಿಗಾಗಿ ಪಕ್ಷದ ಕಚೇರಿ ಮುಂಭಾಗ ಮೂರು ಎಲ್‌ಇಡಿ ಪರದೆಯನ್ನೊಳಗೊಂಡ ವಾಹನಗಳನ್ನು ನಿಲ್ಲಿಸಲಾಗಿತ್ತು. ದೇಶಾದ್ಯಂತ ಪಕ್ಷ 300ಕ್ಕೂ ಹೆಚ್ಚು ಸ್ಥಾನಗಳಿಸಿದರಿಂದ ಕಾರ್ಯಕರ್ತರ ಹಮ್ಮಸ್ಸು ಹಿಮ್ಮುಡಿಗೊಂಡಿತು.
ರಾಜ್ಯದಲ್ಲಿಯೂ ಪಕ್ಷ ಹೆಚ್ಚು ಸ್ಥಾನಗಳಸಿದ ಸಂಭ್ರಮದಲ್ಲಿ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತೆಯರು, ಮಕ್ಕಳು ಮತ್ತು ಬೆಂಬಲಿಗರು ಬಿಜೆಪಿ ಕಚೇರಿಯ ಮುಂದೆ ಬಿಜೆಪಿ ಬಾವುಟ ಹಿಡಿದು, ಕೇಸರಿ ಬಣ್ಣದ ಹೋಳಿ ಹಚ್ಚುವ ಮೂಲಕ ಕುಣಿದು ಕುಪ್ಪಳಿಸಿದರು. ನೂರಾರು ಕಾರ್ಯಕರ್ತರು ಬೈಕ್‌ಗಳಲ್ಲಿ ಬಿಜೆಪಿ ಬಾವುಟ ಹಿಡಿದು ರ್ಯಾಲಿ ಮಾಡುವ ಮೂಲಕ ಖುಷಿಪಟ್ಟರು.
ಸೆಲ್ಫಿಗೆ ಮುಗಿಬಿದ್ದ ಕಾರ್ಯಕರ್ತರು: ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ ಪಿ.ಸಿ.ಮೋಹನ್, ಡಿ.ವಿ.ಸದಾನಂದಗೌಡ ಹಾಗೂ ತೇಜಸ್ವಿಸೂರ್ಯ ಜತೆ ಕೆಲ ಕಾರ್ಯಕರ್ತರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಇನ್ನು ಕೆಲವರು ಪಕ್ಷದ ಕಚೇರಿ ಮುಂಭಾಗ ನರೇಂದ್ರ ಮೋದಿಯ ಮುಖವಾಡ ಧರಿಸಿ ಸೆಲ್ಫಿ ತೆಗೆದುಕೊಂಡರು.