ಜಮ್ಮು-ಕಾಶ್ಮೀರ: ಭಾರತೀಯ ಜನತಾ ಪಕ್ಷದ ಮುಖಂಡರೊಬ್ಬರನ್ನು ಉಗ್ರರು ಗುಂಡಿಟ್ಟು ಹತ್ಯೆಗೈದಿರುವ ಘಟನೆ ಜಮ್ಮು-ಕಾಶ್ಮೀರದ ಬ್ರಝಲೂ ಜಾಗಿರ್ ಗ್ರಾಮದಲ್ಲಿ ಮಂಗಳವಾರ (ಆಗಸ್ಟ್ 17) ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಅಫ್ಘಾನ್ ನಲ್ಲಿ ತಾಲಿಬಾನ್ ಅಟ್ಟಹಾಸ; ಪಾಕ್ ನಲ್ಲಿ ಮಹಾರಾಜ ರಂಜಿತ್ ಸಿಂಗ್ ಪ್ರತಿಮೆ ಧ್ವಂಸ
ಹತ್ಯೆಗೀಡಾದ ವ್ಯಕ್ತಿಯನ್ನು ಜಾವೀದ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದ್ದು, ಇವರು ಹೊಮ್ ಶಾಲಿ ಬಾಗ್ ಕ್ಷೇತ್ರದ ಬಿಜೆಪಿ ಉಸ್ತುವಾರಿಯಾಗಿದ್ದರು. ಈ ಘಟನೆಯನ್ನು ತೀವ್ರವಾಗಿ ಖಂಡಿಸುವುದಾಗಿ ಜಮ್ಮು ಕಾಶ್ಮೀರದ ಬಿಜೆಪಿ ಘಟಕ ತಿಳಿಸಿದೆ. ಇದೊಂದು ಉಗ್ರರ ಹೇಡಿತನದ ಮತ್ತು ನಾಚಿಕೆಯ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಕುಲ್ಗಾಮ್ ಜಿಲ್ಲೆಯ ಹೊಮ್ ಶಾಲಿಬಾಗ್ ಪ್ರದೇಶದ ಬಿಜೆಪಿ ಮುಖಂಡ ಜಾವೀದ್ ಅಹ್ಮದ್ ದಾರ್ ಅವರನ್ನು ಉಗ್ರರು ಗುಂಡಿಕ್ಕಿ ಹತ್ಯೆಗೈದಿದ್ದು, ಅವರ ಕುಟುಂಬಕ್ಕೆ ಸಾಂತ್ವಾನ ವ್ಯಕ್ತಪಡಿಸುವುದಾಗಿ ಕಾಶ್ಮೀರದ ಬಿಜೆಪಿ ಮಾಧ್ಯಮ ಸೆಲ್ ನ ಮುಖ್ಯಸ್ಥ ಮನ್ ಝೂರ್ ಅಹ್ಮದ್ ತಿಳಿಸಿದ್ದಾರೆ.
ಇದೊಂದು ಭಯಾನಕ ಘಟನೆ, ಜಾವೀದ್ ಅಹ್ಮದ್ ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಈ ಘಟನೆಯನ್ನು ಖಂಡಿಸುವುದಾಗಿ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಕಳೆದ ವಾರ ಕುಲ್ಗಾಮ್ ನಲ್ಲಿ ಭದ್ರತಾ ಪಡೆ ಎನ್ ಕೌಂಟರ್ ನಲ್ಲಿ ಲಷ್ಕರ್ ಎ ತೊಯ್ಬಾದ ಉಗ್ರರನ್ನು ಹತ್ಯೆಗೈದಿತ್ತು. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಭದ್ರತಾ ಪಡೆ ಉಗ್ರರನ್ನು ನಿರಂತರವಾಗಿ ಮಟ್ಟಹಾಕುವ ಕಾರ್ಯದಲ್ಲಿ ನಿರತವಾಗಿದೆ ಎಂದು ವರದಿ ಹೇಳಿದೆ.