ಕೋಲ್ಕತಾ: ಪ್ರತಿಭಟನಾ ನಿರತ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಮೇಲೆ ಪಶ್ಚಿಮಬಂಗಾಳದ ಪೊಲೀಸರು ಲಾಠಿಚಾರ್ಜ್ ಮಾಡಿದ ಘಟನೆಯಲ್ಲಿ ಪಕ್ಷದ ಕಾರ್ಯಕರ್ತ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ಸಿಲಿಗುರಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಪೊಲೀಸರ ಲಾಠಿಚಾರ್ಜ್ ನಿಂದ ಕಾರ್ಯಕರ್ತ ಸಾವನ್ನಪ್ಪಿರುವ ಘಟನೆಯನ್ನು ಖಂಡಿಸಿ ರಾಜ್ಯ ಬಿಜೆಪಿ ಉತ್ತರ ಪಶ್ಚಿಮಬಂಗಾಳದಲ್ಲಿ 12ಗಂಟೆ ಬಂದ್ ಗೆ ಕರೆ ನೀಡಿತ್ತು ಎಂದು ವರದಿ ತಿಳಿಸಿದೆ. ಲಾಠಿಚಾರ್ಜ್ ನಲ್ಲಿ ಬಿಜೆಪಿಯ 40 ಕಾರ್ಯಕರ್ತರು ಗಾಯಗೊಂಡಿರುವುದಾಗಿ ತಿಳಿಸಿದೆ.
ಉತ್ತರ ಬಂಗಾಳದ ಸಿಲಿಗುರಿಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿತ್ತು. ಆಡಳಿತಾರೂಢ ಟಿಎಂಸಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಉತ್ತರ್ ಕನ್ಯಾ ಸೆಕ್ರಟರಿಯೇಟ್ ನತ್ತ ನುಗ್ಗಲು ಯತ್ನಿಸಿದ ವೇಳೆ ಪೊಲೀಸರು ಲಾಠಿಚಾರ್ಜ್ ನಡೆಸಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ಹೊಂಡ, ಗುಂಡಿ ರಸ್ತೆಯಿಂದ ಮಾನಸಿಕ, ದೈಹಿಕ ಕಿರುಕುಳ ಆಗ್ತಿದೆ: ಪೊಲೀಸರಿಗೆ ಮಹಿಳೆ ದೂರು!
ಘಟನೆಯಲ್ಲಿ ಉಲೇನ್ ರಾಯ್ ಎಂಬಾತ ಸಾವನ್ನಪ್ಪಿರುವುದಾಗಿ ಪಶ್ಚಿಮಬಂಗಾಳ ಬಿಜೆಪಿ ಆರೋಪಿಸಿದೆ. ಆತನ ಸಾವಿಗೆ ಏನು ಕಾರಣ ಎಂಬುದು ಮರಣೋತ್ತರ ಪರೀಕ್ಷೆ ನಂತರ ತಿಳಿಯಲಿದೆ ಎಂದು ಪಶ್ಚಿಮಬಂಗಾಳ ಪೊಲೀಸರು ತಿಳಿಸಿದ್ದಾರೆ.