ಕಲಘಟಗಿ: ಸ್ಥಳೀಯ ಪಟ್ಟಣ ಪಂಚಾಯ್ತಿಯ 17 ವಾರ್ಡ್‌ಗಳ ಪೈಕಿ 9ರಲ್ಲಿ ಬಿಜೆಪಿ ಜಯ ದಾಖಲಿಸುವುದರೊಂದಿಗೆ ಕಾಂಗ್ರೆಸ್ ಭದ್ರಕೋಟೆ ಛಿದ್ರಗೊಳಿಸಿ ಗೆಲುವಿನ ನಗೆ ಬೀರಿದೆ. ಉಳಿದಂತೆ ಕಾಂಗ್ರೆಸ್ 3, ಜೆಡಿಎಸ್ 2 ಹಾಗೂ ಪಕ್ಷೇತರ ಅಭ್ಯರ್ಥಿಗಳು 3 ವಾರ್ಡ್‌ಗಳಲ್ಲಿ ವಿಜಯದ ಮಾಲೆ ಧರಿಸಿದ್ದಾರೆ.
ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಮತ ಎಣಿಕೆ ನಡೆಯಿತು. ಈ ಸಂದರ್ಭದಲ್ಲಿ ಅಭ್ಯರ್ಥಿಗಳು ಪಡೆದ ಮತಗಳನ್ನು ಧ್ವನಿ ವರ್ಧಕದ ಮೂಲಕ ಘೋಷಿಸುತ್ತಿದ್ದಂತೆ ಅಭ್ಯರ್ಥಿಗಳ ಬೆಂಬಲಿಗರು ಸಿಹಿ ಹಂಚಿ, ಬಣ್ಣವನ್ನು ಎರಚಿಕೊಂಡರಲ್ಲದೇ ಕುಣಿದು ಕುಪ್ಪಳಿಸಿದರು.ಸರಳ ಬಹುಮತವನ್ನು ಬಿಜೆಪಿ ಪಡೆದುಕೊಂಡಿದ್ದು ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಯಾವುದೇ ಕುದುರೆ ವ್ಯಾಪಾರಕ್ಕೆ ಅವಕಾಶವಿಲ್ಲದಂತಾಗಿದೆ. ಬಿಜೆಪಿ ಶಾಸಕ ಸಿ.ಎಂ. ನಿಂಬಣ್ಣವರ ಸ್ಥಳಿಕರೇ ಆಗಿರುವುದರಿಂದ ಈ ಚುನಾವಣೆಯು ಅವರಿಗೆ ಪ್ರತಿಷ್ಠೆಯ ಕಣವಾಗಿತ್ತು. ಮಾಜಿ ಸಚಿವ ಸಂತೋಷ ಲಾಡ್ ಚುನಾವಣಾ ಪ್ರಚಾರಕ್ಕೆ ಒಂದು ಬಾರಿ ಬಂದು ಹೋಗಿದ್ದನ್ನು ಬಿಟ್ಟರೆ ಅವರು ಈ ಚುನಾವಣೆಯಲ್ಲಿ ಹೆಚ್ಚು ಉತ್ಸುಕರಾಗಿರಲಿಲ್ಲ. ಸ್ಥಳೀಯ ಕಾಂಗ್ರೆಸ್ ಪದಾಧಿಕಾರಿಗಳೇ ಗೆಲುವು ಸಾಧಿಸಲು ಹೆಚ್ಚಿನ ಶ್ರಮ ವಹಿಸಿದ್ದರು. 16ನೇ ವಾರ್ಡ್‌ನಲ್ಲಿ ಮತದಾನಕ್ಕೂ ಮುನ್ನವೇ ಪಕ್ಷೇತರ ಅಭ್ಯರ್ಥಿ ಮಾಲಾ ಲಮಾಣಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
17ನೇ ವಾರ್ಡ್‌ನಲ್ಲಿ ಬಿಜೆಪಿಯ ಅನಸೂಯಾ ಹೆಬ್ಬಳ್ಳಿಮಠ ಅವರು ಪಪಂ ಹಾಲಿ ಅಧ್ಯಕ್ಷ ಬೂದಪ್ಪ ಹುರಕಡ್ಲಿ ಅವರ ಪತ್ನಿ ಕಾಂಗ್ರೆಸ್ ಪಕ್ಷದ ನಿರ್ಮಲಾ ಹುರಕಡ್ಲಿ ಅವರನ್ನು 188 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
ಬಿಜೆಪಿ ಬಲ 11ಕ್ಕೆ ಏರಿಕೆ: ಬಂಡಾಯ ಅಭ್ಯರ್ಥಿಗಳಾಗಿ ಕಣದಲ್ಲುಳಿದು ಪಕ್ಷೇತರರಾಗಿ ಚುನಾಯಿತರಾದ 5ನೇ ವಾರ್ಡ್‌ನ ಬಸವರಾಜ ಕಡ್ಲಾಸ್ಕರ ಹಾಗೂ 16ನೇ ವಾರ್ಡ್‌ನಿಂದ ಅವಿರೋಧ ಆಯ್ಕೆಗೊಂಡ ಮಾಲಾ ಲಮಾಣಿ ಅವರು ಬಿಜೆಪಿ ಕಚೇರಿಯಲ್ಲಿ ನಡೆದ ವಿಜಯೋತ್ಸವದಲ್ಲಿ ಪಾಲ್ಗೊಂಡು ಬಿಜೆಪಿಗೆ ತಮ್ಮ ಬೆಂಬಲ ಸೂಚಿಸಿದರು. ಇದರಿಂದಾಗಿ ಪಕ್ಷದ ಬಲವು 11 ಕ್ಕೇ ಏರಿದಂತಾಗಿದೆ.
ವಿಜಯೋತ್ಸವ: ಹೆಚ್ಚಿನ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಪಕ್ಷದ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಲಾಯಿತು. ತಾಲೂಕಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಶಶಿಧರ ನಿಂಬಣ್ಣವರ, ಮಾಂತೇಶ ತಹಸೀಲ್ದಾರ, ರಾಜು ಚಿಕ್ಕಮಠ, ಸಾಯಿನಾಥ ಯಲ್ಲಾಪುರಕರ, ವಿಜಯ ಬೆಣ್ಣಿ, ಚಂದ್ರಗೌಡ ಪಾಟೀಲ, ಫಕ್ಕೀರೇಶ ನೆಸ್ರೇಕರ, ಎನ್.ಬಿ. ಕುರಿಯವರ, ಬಸವರಾಜ ಶೆರೇವಾಡ, ಶಶಿಧರ ಹುಲಿಕಟ್ಟಿ, ನರೇಶ ಮಲ್ಲಾಡದ, ಸುರೇಶ ಶೀಲವಂತರ ಮೊದಲಾದವರು ಪಾಲ್ಗೊಂಡಿದ್ದರು.