Advertisement

ಅಮೀನಗಡ ಪಪಂನಲ್ಲಿ ಅರಳಿದ ಕಮಲ

02:14 PM Oct 18, 2020 | Suhan S |

ಅಮೀನಗಡ: ಕರದಂಟು ಖ್ಯಾತಿಯ ಅಮೀನಗಡ ಪಟ್ಟಣಪಂಚಾಯತ ಆಡಳಿತ ಇದೇ ಮೊದಲ ಬಾರಿಗೆ ಬಿಜೆಪಿ ವಶಕ್ಕೆ ಬಂದಿದ್ದು, ಶನಿವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯಸಂಗಪ್ಪ ತಳವಾರ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಶಂಕ್ರಮ್ಮ ಗೌಡರ ಚುನಾಯಿತರಾದರು.

Advertisement

ಪರಿಶಿಷ್ಟ ಪಂಗಡ (ಎಸ್‌.ಟಿ) ಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ವಾರ್ಡ್‌ ನಂ. 8ರ ಸದಸ್ಯ ಸಂಗಪ್ಪ ತಳವಾರ ಏಕೈಕ ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಅವರಿಗೆ ಸುಲಭವಾಗಿ ದೊರೆಯಿತು. ಮೀಸಲಾತಿ ಅನ್ವಯ ತಳವಾರ ಅವರೊಬ್ಬರೇ ಅಧ್ಯಕ್ಷ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಹೀಗಾಗಿ ಅವರ ಆಯ್ಕೆ ಅವಿರೋಧವಾಗಿ ನಡೆಯಿತು. ಹಿಂದುಳಿದ ವರ್ಗ ಅ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ವಾರ್ಡ್‌ ನಂ. 2ರ ಶಂಕ್ರಮ್ಮ ಗೌಡರ ಆಯ್ಕೆಯಾದರು.

ಮೀಸಲಾತಿ ಘೋಷಣೆ ಅನ್ವಯ ಅಮೀನಗಡ ಪಪಂನಲ್ಲಿ ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ಏಕೈಕ ಸದಸ್ಯರಿದ್ದು, ಅವರೊಬ್ಬರೇ ನಾಮಪತ್ರ ಸಲ್ಲಿಸಿದರು. ಹೀಗಾಗಿ ಅವರು ಅವಿರೋಧವಾಗಿ ಆಯ್ಕೆಗೊಂಡರು. ಕಾಂಗ್ರೆಸ್‌ನಲ್ಲಿ ಪರಿಶಿಷ್ಠಪಂಗಡಕ್ಕೆ ಸೇರಿದ ಸದಸ್ಯರು ಯಾರು ಇಲ್ಲ.

ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಪಟ್ಟಣದ ಪಪಂಯಲ್ಲಿ ಬಿಜೆಪಿ-7, ಕಾಂಗ್ರೆಸ್‌-7 ಹಾಗೂ ಪಕ್ಷೇತರರು-2 ಸೇರಿ ಒಟ್ಟು 16 ಜನ ಸದಸ್ಯರು ಇದ್ದಾರೆ. ಉಪಾಧ್ಯಕ್ಷ ಸ್ಥಾನದಚುನಾವಣೆಯಲ್ಲಿ ಕಾಂಗ್ರೆಸ್‌ನ ಸದಸ್ಯೆ ಶಾಂತವ್ವ ಯಂಕಂಚಿ, ಬಿಜೆಪಿಯ ಸದಸ್ಯೆ ಶಂಕ್ರಮ್ಮ ಗೌಡರ ನಾಮಪತ್ರ ಸಲ್ಲಿಸಿದ್ದರು.

ಇದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಸದಸ್ಯರು ಕೈ ಎತ್ತುವ ಮೂಲಕ ಮತದಾನ ಮಾಡಿದರು. ಚುನಾವಣೆ ಪ್ರಕ್ರಿಯೆಯಲ್ಲಿ ಬಿಜೆಪಿಯ ಅಭ್ಯರ್ಥಿ ಶಂಕ್ರಮ್ಮ 9 (ಶಾಸಕ ಮತ್ತು ಸಂಸದರ ಮತ) ಮತ ಪಡೆದು ಆಯ್ಕೆಗೊಂಡರೆ ಕಾಂಗ್ರೆಸ್‌ನ ಶಾಂತವ್ವ ಯಂಕಂಚಿ 7 ಮತ ಪಡೆದು ಪರಾಭವಗೊಂಡರು. ಕಳೆದ ಬಾರಿ ಪಟ್ಟಣ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ ಇಬ್ಬರು ಪಕ್ಷೇತರ ಸದಸ್ಯರು, ಸಭೆ ಆರಂಭಗೊಳ್ಳುತ್ತಿದ್ದಂತೆ ಆಗಮಿಸಿದ್ದರಾದರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸದೇ ಹೊರ ನಡೆದರು.

Advertisement

ಹೀಗಾಗಿ ಕಾಂಗ್ರೆಸ್‌-ಬಿಜೆಪಿ ಸಮಬಲ ಪಡೆದ ಹಿನ್ನೆಲೆಯಲ್ಲಿ ಶಾಸಕ ಡಾ| ವೀರಣ್ಣ ಚರಂತಿಮಠ ಹಾಗೂ ಸಂಸದ ಪಿ.ಸಿ. ಗದ್ದಿಗೌಡರ ಕೂಡ, ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ಮತದಾನ ಮಾಡಿದರು. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯನ್ನು ಚುನಾವಣಾಧಿಕಾರಿಯೂ ಆಗಿದ್ದ ಹುನಗುಂದ ತಹಶೀಲದಾರ ಬಸವರಾಜ ನಾಗರಾಳ ಘೋಷಿಸಿದರು.

ಬೀಡುಬಿಟ್ಟ ಶಾಸಕ-ಸಂಸದ: ಪಟ್ಟಣ ಪಂಚಾಯತನಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅರಳಿಸಲು ಸಂಕಲ್ಪ ಮಾಡಿದ್ದ ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಡಾ|ವೀರಣ್ಣ ಚರಂತಿಮಠ ನಾಮಪತ್ರ ಸಲ್ಲಿಕೆಯಿಂದ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಪಟ್ಟಣ ಪಂಚಾಯಿತಿ ಆವರಣದಲ್ಲೇ ಬೀಡುಬಿಟ್ಟಿದ್ದರು. ಕಳೆದ ಬಾರಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದ ಇಬ್ಬರು ಪಕ್ಷೇತರರು, ಈ ಬಾರಿಯೂ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರೆ, ಇಲ್ಲೂ ಕಾಂಗ್ರೆಸ್‌-ಬಿಜೆಪಿ ಸಮಬಲ ಆಗುತ್ತಿತ್ತು. ಆಗ ಚೀಟಿ ಎತ್ತುವ ಮೂಲಕ ಉಪಾಧ್ಯಕ್ಷರ ಆಯ್ಕೆ ಮಾಡಬೇಕಾದ ಪ್ರಸಂಗ ಎದುರಾಗುತ್ತಿತ್ತು. ಆದರೆ, ಪಕ್ಷೇತರರು ಮತದಾನ ಮಾಡದೇ ಗೈರು ಉಳಿದ ಪರಿಣಾಮ, ಉಪಾಧ್ಯಕ್ಷ ಸ್ಥಾನವೂ ಬಿಜೆಪಿಗೆ ಒಲಿಯಿತು.

Advertisement

Udayavani is now on Telegram. Click here to join our channel and stay updated with the latest news.

Next