ಚೆನ್ನೈ : ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನೊಂದಿಗೆ ದ್ರಾವಿಡ ಭೂಪಟದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಅಳಿಸಿಹಾಕಲಾಗಿದೆ ಮತ್ತು 2024 ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಸಮಾನ ಮನಸ್ಕ ಪಕ್ಷಗಳು ಸೇರಬೇಕು ಎಂದು ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಶನಿವಾರ ಕರೆ ನೀಡಿದ್ದಾರೆ.
ಸ್ಟಾಲಿನ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಉನ್ನತ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ದೂರವಾಣಿ ಮೂಲಕ ಮಾತನಾಡಿ ಕರ್ನಾಟಕದಲ್ಲಿ ಪಕ್ಷದ ಅಮೋಘ ಗೆಲುವಿಗಾಗಿ ಅಭಿನಂದಿಸಿದರು.
ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಸ್ಟಾಲಿನ್ “ದ್ರಾವಿಡ ಕುಟುಂಬದ ನೆಲವು ಬಿಜೆಪಿಯಿಂದ ದೂರವಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಮರುಸ್ಥಾಪಿಸಲು 2024ರ ಲೋಕಸಭಾ ಚುನಾವಣೆ ಗೆಲ್ಲಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ” ಎಂದು ಕರೆ ನೀಡಿದ್ದಾರೆ.
”ಸಹೋದರ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅಸಮರ್ಥನೀಯವಾಗಿ ಅನರ್ಹಗೊಳಿಸಿರುವುದು, ರಾಜಕೀಯ ವಿರೋಧಿಗಳ ವಿರುದ್ಧ ಪ್ರಧಾನ ತನಿಖಾ ಸಂಸ್ಥೆಗಳ ದುರ್ಬಳಕೆ, ಹಿಂದಿ ಹೇರಿಕೆ, ಅತಿರೇಕದ ಭ್ರಷ್ಟಾಚಾರ ಇವೆಲ್ಲವೂ ಮತದಾನದ ವೇಳೆ ಕರ್ನಾಟಕದ ಜನರ ಮನಸ್ಸಿನಲ್ಲಿ ಪ್ರತಿಧ್ವನಿಸಿದೆ. ಬಿಜೆಪಿಯ ಸೇಡಿನ ರಾಜಕಾರಣಕ್ಕೆ ತಕ್ಕ ಪಾಠ ಕಲಿಸುವ ಮೂಲಕ ಕನ್ನಡಿಗನ ಅಭಿಮಾನವನ್ನು ಎತ್ತಿ ಹಿಡಿದಿದ್ದಾರೆ” ಎಂದು ಅಭಿಪ್ರಾಯ ಹೊರ ಹಾಕಿದ್ದಾರೆ.
“ಕರ್ನಾಟಕವನ್ನು ಹಿಂದುತ್ವ ಪ್ರಯೋಗಾಲಯವಾಗಿ ಬದಲಾಯಿಸಲಾಯಿತು, ಮುಸ್ಲಿಮರಿಗೆ ಮೀಸಲಾತಿಯನ್ನು ರದ್ದುಗೊಳಿಸಲಾಯಿತು. ಕೋಮುವಾದಿ ರಾಜಕಾರಣ ಮಾಡುತ್ತಿರುವ ಬಿಜೆಪಿಗೆ ಕರ್ನಾಟಕದ ಜನತೆ ತಕ್ಕ ಪಾಠ ಕಲಿಸಿದ್ದಾರೆ” ಎಂದು ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸಂಸದ ವೈಕೋ ಹೇಳಿದ್ದಾರೆ.
ಮಕ್ಕಳ್ನೀಧಿ ಮೈಯಂ ಮುಖ್ಯಸ್ಥ, ಪ್ರಖ್ಯಾತ ನಟ ಕಮಲ್ ಹಾಸನ್ ಅವರು ರಾಹುಲ್ ಗಾಂಧಿ ಅವರನ್ನು ಗೆಲುವಿಗಾಗಿ ಅಭಿನಂದನೆ ಸಲ್ಲಿಸಿದ್ದಾರೆ.