ದೇಶದ ಕರ್ನಾಟಕ, ದೆಹಲಿ, ಮಧ್ಯಪ್ರದೇಶ, ಜಾರ್ಖಂಡ್, ಪಶ್ಚಿಮಬಂಗಾಳ, ಅಸ್ಸಾಂ, ರಾಜಸ್ಥಾನ್ ಹಾಗೂ ಹಿಮಾಚಲ ಪ್ರದೇಶ ಸೇರಿದಂತೆ 8 ರಾಜ್ಯಗಳ 10 ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯ ಫಲಿತಾಂಶ ಗುರುವಾರ ಹೊರಬಿದ್ದಿದೆ. ಕರ್ನಾಟಕದ ಚುನಾವಣೆ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಪ್ರತಿಷ್ಠೆಯ ಕಣವಾಗಿತ್ತು. ಈ ನಿಟ್ಟಿನಲ್ಲಿ ಬಿಜೆಪಿಗೆ ಮುಖಭಂಗವಾದಂತಾಗಿದೆ. ಕರ್ನಾಟಕದ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ.ಮತ್ತೊಂದೆಡೆ ಹಿಮಾಚಲ ಪ್ರದೇಶ, ದೆಹಲಿಯ ರಾಜೌರಿ ಗಾರ್ಡನ್, ಮಧ್ಯಪ್ರದೇಶ, ಅಸ್ಸಾಂ, ರಾಜಸ್ತಾನ್ ಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಕುತೂಹಲಕಾರಿ ಬೆಳವಣಿಗೆ ಎಂಬಂತೆ ದೆಹಲಿ ಉಪ ಸಮರದಲ್ಲಿ ಬಿಜೆಪಿ ಗೆಲುವಿನ ನಗು ಬೀರಿದ್ದು, ಆಮ್ ಆದ್ಮಿ ಪಕ್ಷ ಠೇವಣಿ ಕಳೆದುಕೊಂಡು ತೀವ್ರ ಮುಖಭಂಗಕ್ಕೀಡಾಗಿದೆ. ಪಶ್ಚಿಮಬಂಗಾಳದ ಕಾಂತಿ ದಕ್ಷಿಣ್ ಕ್ಷೇತ್ರದಲ್ಲಿ ಟಿಎಂಸಿ ಜಯ ಸಾಧಿಸಿದೆ. ಜಾರ್ಖಂಡ್ ನ ಲಿಟ್ಟಿಪಾರಾ ಕ್ಷೇತ್ರದಲ್ಲಿ ಜೆಎಂಎಂ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಕರ್ನಾಟಕದ ಉಪಸಮರದ ಫಲಿತಾಂಶ ಕಾಂಗ್ರೆಸ್, ಬಿಜೆಪಿಗೆ ಮುಂದಿನ ಸಾರ್ವತ್ರಿಕ ಚುನಾವಣೆಗೆ ತಾಲೀಮು ನಡೆಸಲು ವೇದಿಕೆ ಕಲ್ಪಿಸಿಕೊಟ್ಟಿದ್ದರೆ, ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಎಂಸಿಡಿ(ದೆಹಲಿ ಮಹಾನಗರ ಪಾಲಿಕೆ) ಚುನಾವಣೆಗೆ ಹೆಚ್ಚಿನ ಸ್ಥಾನ ಪಡೆಯುವ ವಿಶ್ವಾಸ ಮೂಡಿಸಿದೆ.