ಹೊಸಕೋಟೆ: ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ 3ನೇ ಸ್ಥಾಲ ಪಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ತಾಲೂಕಿನ ನಂದಗುಡಿಯಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಚುನಾವಣೆಯಲ್ಲಿ ಸ್ಪರ್ಧೆಯಿರುವುದು ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ನಡುವೆಯಷ್ಟೆ.
ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನ ನೀಡಿದ್ದರೂ ಆಸೆ ಆಮಿಷಗಳಿಗೆ ಒಳಗಾಗಿ ಕೋಮುವಾದಿ ಬಿಜೆಪಿಗೆ ಸೇರ್ಪಡೆಯಾಗಿರುವುದು ಹೆತ್ತ ತಾಯಿಗೆ ದ್ರೋಹ ಬಗೆದಂತಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪದ್ಮಾವತಿ ಸುರೇಶ್ ಬಗ್ಗೆ ಕೀಳಾಗಿ ಮಾತನಾಡಿರುವುದಕ್ಕೆ ಕ್ಷೇತ್ರದ ಮಹಿಳೆಯರೆ ಸೂಕ್ತ ಉತ್ತರ ನೀಡಬೇಕು. ತಮ್ಮ ಅಧಿಕಾರವಧಿಯಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳನ್ನು ಈಡೇರಿಸಿ ಅನ್ನಭಾಗ್ಯ ಯೋಜನೆಯಡಿ 7 ಕೆಜಿಗಳಷ್ಟು ಅಕ್ಕಿಯನ್ನು ಸಹ ನೀಡಲಾಗಿತ್ತು.
ಸಾಲ ಮನ್ನಾ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿದಾಗ ವಿಧಾನಸೌಧದದಲ್ಲಿ ನೋಟು ಮುದ್ರಣ ಯಂತ್ರ ಇಟ್ಟುಕೊಂಡಿಲ್ಲ ಎಂಬ ಬೇಜವಾಬ್ದಾರಿ ಉತ್ತರ ನೀಡಿದ್ದರು. ಪ್ರಧಾನಿ ಮೋದಿಯವರು 5 ವರ್ಷದಲ್ಲಿ 10 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿಯೂ ರೈತರ ಆದಾಯದುಪ್ಪಟ್ಟು ಮಾಡುವುದಾಗಿ ನೀಡಿದ್ದ ಹೇಳಿಕೆಗಳನ್ನುಈಡೇರಿಸುವಲ್ಲಿ ವಿಫಲವಾಗಿದ್ದಾರೆ.
ಸರಕಾರಿ ಸ್ವಾಮ್ಯದ ಸಂಸ್ಥೆಗಳು ನಷ್ಟ ಅನುಭವಿಸಿ ಮುಚ್ಚಬೇಕಾದ ಹಂತ ತಲುಪಿವೆ. ದೇಶದಲ್ಲಿ ಹಸಿರು ಕ್ರಾಂತಿ ಮಾಡಿದ ಹೆಗ್ಗಳಿಕೆಯನ್ನು ಕಾಂಗ್ರೆಸ್ ಪಕ್ಷ ಹೊಂದಿದ್ದು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದವರಾಗಿದ್ದಾರೆ. ವಿದೇಶದಿಂದ ಕಪ್ಪು ಹಣ ತರುವುದಾಗಿ ಹೇಳಿ ಇದೀಗ ಅನರ್ಹ ಶಾಸಕರಿಗೆ 25 ಕೋಟಿ ಕಪ್ಪು ಹಣವನ್ನು ಹಂಚಿಕೆ ಮಾಡಿರುವುದು ಇವರ ಸಾಧನೆಗೆ ನಿದರ್ಶನವಾಗಿದೆ.
ಇದೀಗ ಸುಳ್ಳುಗಳನ್ನು ಹೇಳುವ ಮೂಲಕ ಅಲ್ಪಸಂಖ್ಯಾತರ ಮತಗಳನ್ನು ಪಡೆಯಲು ಬಿಜೆಪಿ ಹುನ್ನಾರ ನಡೆಸುತ್ತಿದೆ. ಟಿಪ್ಪು ಜಯಂತಿಯನ್ನು ಯಾವುದೇ ಜನಾಂಗವನ್ನು ಓಲೈಸಲು ಮಾಡದೆ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ನಾಯಕನೆಂದು ಗೌರವಿಸಿ ಆಚರಣೆ ಮಾಡಲಾಗಿತ್ತು. ಮತದಾರರು ಬಿಜೆಪಿಯ ಕುತಂತ್ರಗಳನ್ನು ಅರಿತು ಆಮಿಷ, ಬೆದರಿಕೆ ತಂತ್ರಗಳಿಗೆ ಒಳಗಾಗದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಮಾಜಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ 2018ರಲ್ಲಿ ತಾಲೂಕಿನ 30 ಕೆರೆಗಳಿಗೆ ನೀರು ತುಂಬಲು 100 ಕೋಟಿ ರೂ.ಗಳನ್ನು ಮಂಜೂರು ಮಾಡಲು ಅನುಮೋದನೆ ನೀಡಲಾಗಿತ್ತು. ಸುಪ್ರೀಂ ಕೋರ್ಟ್ ಅನರ್ಹರು ಎಂದು ತೀರ್ಪು ನೀಡಿದ್ದು ಇಂತಹ ನಾಲಾಯಕ್ ಜನರಿಂದ ಏನು ಮಾಡಲು ಸಾಧ್ಯವಿಲ್ಲ.
ಸ್ವಾರ್ಥ ಸಾಧನೆಗಾಗಿ ಉಪ್ಪು ತಿಂದ ಮನೆಗೆ ದ್ರೋಹ ಮಾಡಿ ಬಿಜೆಪಿಗೆ ಸೇರಿರುವ ಅವಕಾಶವಾದಿಗಳನ್ನು ಮತದಾರರು ತಿರಸ್ಕರಿಸಬೇಕು ಎಂದರು. ಆನೇಕಲ್ ಶಾಸಕ ಶಿವಣ್ಣ, ಹೆಬ್ಬಾಳ ಶಾಸಕ ಬೈರತಿ ಸುರೇಶ್, ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಸಹ ಮಾತನಾಡಿದರು.