Advertisement
2019ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಜೆ.ಎನ್. ಶ್ರೀನಿವಾಸ್ ದಂಪತಿ ತಮ್ಮನ್ನು ಸರಿಯಾಗಿ ಕಾಣುತ್ತಿಲ್ಲ ಎಂಬ ಬೇಗುದಿಯಿಂದ ಕೈ ಬಿಟ್ಟು ಕಮಲ ಪಾಳೆಯ ಸೇರಿದ ಕೆಲವೇ ದಿನಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಪೈಪೋಟಿಯ ನಡುವೆಯೂ ನಿರೀಕ್ಷೆಯಂತೆ ಗೆಲ್ಲುವ ಮೂಲಕ ಕಾಂಗ್ರೆಸ್ ಗೆ ಮರ್ಮಾಘಾತ ಉಂಟು ಮಾಡಿದರೆ, ಬಿಜೆಪಿಯ ಕಮಲ ಉತ್ತರದಲ್ಲಿ ಇನ್ನೂ ಆಳವಾಗಿ ಬೇರೂರುವಂತೆ ಮಾಡಿದ್ದಾರೆ.
Related Articles
Advertisement
ಒಟ್ಟಾರೆ 45 ಸದಸ್ಯತ್ವ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನಾಲ್ವರು ಪಕ್ಷೇತರರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರ ಬೆಂಬಲದೊಂದಿಗೆ ರಾಜಕೀಯ ಚಾಣಾಕ್ಷತೆಯ ಮೂಲಕ ಅಧಿಕಾರ ನಡೆಸುತ್ತಿದೆ. ಎರಡು ವಾರ್ಡ್‌ಗಳಲ್ಲಿನ ಗೆಲುವು ಬಿಜೆಪಿಗೆ ಕಾಂಗ್ರೆಸ್‌ನೊಂದಿಗೆ ಸಮಬಲ ಸಾಧಿಸಲು ನೆರವಾಗಿದೆ. ಈಗ ಪಾಲಿಕೆಯಲ್ಲಿ ಬಿಜೆಪಿ- ಕಾಂಗ್ರೆಸ್ ತಲಾ 20 ಸದಸ್ಯರನ್ನು ಹೊಂದಿವೆ. ಕಳೆದ ಚುನಾವಣೆಯಲ್ಲಿ ಬಿಜೆಪಿಗಿಂತಲೂ ಹೆಚ್ಚು ವಾರ್ಡ್ ಗೆದ್ದಿದ್ದರೂ ಕಾಂಗ್ರೆಸ್ ಮೇಯರ್ ಗಾದಿಗೇರುವ ನಿಟ್ಟಿನಲ್ಲಿ ದಿಟ್ಟ ಪ್ರಯತ್ನ ನಡೆಸಲಿಲ್ಲ. ಪ್ರಮುಖವಾಗಿ ತನ್ನದೇ ಸದಸ್ಯರನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗಿದೆ. ಈಗ ಎರಡು ವಾರ್ಡ್ ಉಪ ಚುನಾವಣೆಯಲ್ಲಿ ಸೋಲುವ ಮೂಲಕ ಕಾಂಗ್ರೆಸ್ ಬಲ 23ರಿಂದ 20ಕ್ಕೆ ಕುಸಿದಿದೆ. ಮುಂದಿನ ದಿನಗಳಲ್ಲಿ ಇನ್ನೂ ಇಬ್ಬರು ಕಾಂಗ್ರೆಸ್‌ಗೆ ಕೈ ಕೊಡಬಹುದು ಎಂಬ ಮಾತು ಕೇಳಿ ಬರುತ್ತಿವೆ. ಅದು ನಿಜವಾದಲ್ಲಿ ಕಾಂಗ್ರೆಸ್ ಸ್ಥಿತಿ ಇನ್ನೂ ಶೋಚನೀಯವಾಗಲಿದೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿಯೇ ತೀರುವ ಉದ್ದೇಶದಿಂದ ಕಾರ್ಯತಂತ್ರ ರೂಪಿಸುತ್ತಿರುವ ಬಿಜೆಪಿಗೆ ಎರಡು ವಾರ್ಡ್‌ಗಳ ಉಪ ಚುನಾವಣೆಯಲ್ಲಿನ ಗೆಲುವು ಟಾನಿಕ್. ಇಬ್ಬರು ಸದಸ್ಯರು ತಂದುಕೊಡುವ ಒಂದೊಂದು ಮತ ಗೆಲುವಿನ ಮೆಟ್ಟಿಲುಗಳಾಗಲಿವೆ. ಕಾಂಗ್ರೆಸ್ ಈಗಾಲಾದರೂ ಮೈಚಳಿ ಬಿಟ್ಟು ಸನ್ನದ್ಧವಾದರೆ ವಿಧಾನಸಭಾ ಚುನಾವಣೆಯಲ್ಲಿ ಏನಾದರೂ ಆಗಬಹುದು. ಇಲ್ಲದೆ ಹೋದಲ್ಲಿ ಕಮಲ ಪಾಳೆಯದ ಗೆಲುವಿನ ನಾಗಾಲೋಟಕ್ಕೆ ತಡೆ ಇರಲಾರದು ಎಂಬ ಮಾತುಗಳು ಈಗಿನಿಂದಲೇ ಕೇಳಿ ಬರುತ್ತಿವೆ.
-ರಾ. ರವಿಬಾಬು