ತಿರುವನಂತಪುರಂ: ‘2019 ರಲ್ಲೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಭಾರತ ”ಹಿಂದೂ ಪಾಕಿಸ್ಥಾನ” ವಾಗುತ್ತದೆ’ ಎಂದು ಕಾಂಗ್ರೆಸ್ ನಾಯಕ,ಸಂಸದ ಶಶಿ ತರೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತಿರುವನಂತಪುರಂನಲ್ಲಿ ಮಂಗಳವಾರ ನಡೆದ ಸಭೆಯೊಂದರಲ್ಲಿ ತರೂರ್ ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿ ಈ ಹೇಳಿಕೆ ನೀಡಿದ್ದು , ‘ಬಿಜೆಪಿ ಗೆಲುವು ಪುನರಾವರ್ತನೆಯಾದರೆ ಹೊಸ ಸಂವಿಧಾನವನ್ನು ಬರೆಯಲಿದೆ.ಹೊಸ ಸಂವಿಧಾನ ಕಡಿಮೆ ಸಹಿಷ್ಣು ಮತ್ತು ಅಂತರ್ಗತವಾಗಿರುತ್ತದೆ’ ಎಂದಿದ್ದಾರೆ.
‘ಹಿಂದೂ ರಾಷ್ಟ್ರ ನಿರ್ಮಾಣ ಮಾಡಲು ಬಿಜೆಪಿ ಮುಂದಾಗಲಿದೆ. ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತರಿಗೆ ಹೇಗೆ ಮಾನ್ಯತೆ ಇಲ್ಲವೋ ಅಂತಹ ಸ್ಥಿತಿ ಇಲ್ಲಿನ ಅಲ್ಪಸಂಖ್ಯಾತರಿಗೂ ನಿರ್ಮಾಣವಾಗಲಿದೆ’ ಎಂದಿದ್ದಾರೆ.
‘ಬಿಜೆಪಿಯ ಹೊಸ ಸಂವಿಧಾನದಲ್ಲಿ ಮಹಾತ್ಮ ಗಾಂಧೀಜಿ , ಜವಹಾರ್ ಲಾಲ್ ನೆಹರು, ಸರ್ದಾರ್ ಪಟೇಲ್, ಮೌಲಾನಾ ಅಜಾದ್ ಅವರ ಆಶಯಗಳು ಒಳಗೊಂಡಿರುವುದಿಲ್ಲ’ ಎಂದಿದ್ದಾರೆ.
ತರೂರ್ ವಿವಾದಿತ ಹೇಳಿಕೆ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕ್ಷಮೆ ಯಾಚಿಸಲು ಬಿಜೆಪಿ ಪಟ್ಟು ಹಿಡಿದಿದೆ.
ಬಿಜೆಪಿ ವಕ್ತಾರ ಸಂಬೀತ್ ಪಾತ್ರ ಈ ಕುರಿತು ಕಿಡಿ ಕಾರಿ ‘ಕಾಂಗ್ರೆಸ್ ಪಾಕಿಸ್ಥಾನದ ಹುಟ್ಟಿಗೆ ಕಾರಣವಾದ ಪಕ್ಷ . ಅದೀಗ ಭಾರತವನ್ನು ಹಿಮ್ಮೆಟ್ಟಿಸಲು , ಹಿಂದೂಗಳಿಗೆ ಅಪಖ್ಯಾತಿ ತರಲು ಮುಂದಾಗಿದೆ’ ಎಂದು ಕಿಡಿ ಕಾರಿದ್ದಾರೆ.