ಶಿವಮೊಗ್ಗ: 2 ನೇ ಹಂತದಲ್ಲಿ ಚುನಾವಣೆ ನಡೆಯುತ್ತಿರುವ 14 ಕ್ಷೇತ್ರಗಳ ಪೈಕಿ 12 ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗದ ಶಿಕಾರಿಪುರದಲ್ಲಿ ಮಂಗಳವಾರ ಬೆಳಗ್ಗೆ ಮತ ಚಲಾವಣೆ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ 14 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ನಾನೀಗ ಮತದಾನವನ್ನ ಮಾಡಿ ಬರುತ್ತಿದ್ದೇನೆ. ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಆದಿಯಾಗಿ ಎಲ್ಲರೂ ಸೋಲುತ್ತಾರೆ. 14 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳು ಬಿಜೆಪಿಗೆ ನಿಶ್ಚಿತ ಎಂದರು.
ಮೈತ್ರಿಪಕ್ಷದ ನಾಯಕರು ಕೋಟಿಗಟ್ಟಲೆ ಹಣವನ್ನ ಚುನಾವಣೆಗೆ ಖರ್ಚು ಮಾಡಿದ್ದಾರಾದರೂ ರಾಘವೇಂದ್ರ ಅವರು ಒಂದುವರೆ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಶಿವಮೊಗ್ಗದಲ್ಲಿ ಗೆಲ್ಲುತ್ತಾರೆ ಎಂದರು.
ರಾಜ್ಯದಲ್ಲಿ 22 ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಫಲಿತಾಂಶ ಪ್ರಕಟವಾದ ಬಳಿಕ ಕಾಂಗ್ರೆಸ್ ಜೆಡಿಎಸ್ ನ ಭಿನ್ನಮತ ಮೂರು ಪಟ್ಟು ಹೆಚ್ಚಾಗುತ್ತದೆ ಎಂದರು.
ಫಲಿತಾಂಶ ಪ್ರಕಟವಾದ ಬಳಿಕ ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ರಾಷ್ಟ್ರೀಯ ನಾಯಕರ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದರು.
ಸಿದ್ದರಾಮಯ್ಯ ಮತ್ತು ಎಂ.ಬಿ.ಪಾಟೀಲ್ ನಾನೇ ಸಿಎಂ ಎನ್ನುತ್ತಿದ್ದು, ಇಬ್ಬರ ನಡುವೆ ಪೈಪೋಟಿ ಜಾಸ್ತಿಯಾಗಿದ್ದು ಒಂದು ಅವಕಾಶಕ್ಕಾಗಿ ಅವರು ಕಾಯುತ್ತಿದ್ದಾರೆ ಎಂದರು.