ಲಕ್ನೋ : ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಎಲ್ಲ ಸಾಲಗಳನ್ನು ಮನ್ನಾ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆ ನೀಡಿದ್ದಾರೆ.
ಫೆ.11ರಿಂದ ತೊಡಗಿ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯುವ ಉತ್ತರಪ್ರದೇಶದ ಮೀರತ್‌ನಲ್ಲಿಂದು ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾರೀ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು “ಉತ್ತರ ಪ್ರದೇಶದ ಜನರಿಗೆ ಅಭಿವೃದ್ಧಿ ಬೇಕಾಗಿದೆ; ಮಹಿಳೆಯರಿಗೆ ಸುರಕ್ಷೆ ಬೇಕಾಗಿದೆ; ಆದುದರಿಂದ ಉತ್ತರ ಪ್ರದೇಶದಲ್ಲಿ ಬದಲಾವಣೆ ತರಬೇಕಾಗಿದೆ’ ಎಂದು ಹೇಳಿದರು.
ದೇಶದ ಜನರ ಸುರಕ್ಷೆಗಾಗಿ ಸದ್ದು-ಸುದ್ದಿ ಇಲ್ಲದೆ ಕಾರ್ಯಾಚರಣೆ ಮಾಡುವ ಅಗತ್ಯ ಇದ್ದುದರಿಂದಲೇ ಸರಕಾರ ಪಾಕ್ ವಿರುದ್ಧ ಸರ್ಜಿಕಲ್ ದಾಳಿಗೆ ಮುಂದಾಯಿತು. ಆದರೆ ಕೆಲವರು ಅದಕ್ಕೆ ಪುರಾವೆ ಕೇಳಿದರು. ಸೇನೆಯ ಸತ್ಯಸಂಧತೆಯನ್ನು ಪ್ರಶ್ನಿಸಿದರು; ಅಂತಹವರನ್ನು ರಾಜಕಾರಣದಲ್ಲಿ ಇರಲು ಬಿಡಬೇಕೇ ಎಂದು ಮೋದಿ ಪ್ರಶ್ನಿಸಿದರು.
40 ವರ್ಷಗಳ ಕಾಲ ಅಧಿಕಾರದಲ್ಲಿ ಸರಕಾರ ಸೈನಿಕರಿಗೆ ಏಕ ಶ್ರೇಣಿ – ಏಕ ರೀತಿಯ ಪಿಂಚಣಿ ನೀಡುವ ವಿಷಯದಲ್ಲಿ ತಾರಮ್ಮಯ್ಯ ಎನ್ನುತ್ತಲೇ ಕಾಲ ಕಳೆಯಿತು; ಹೊರತು ಮಾಡಿದ್ದೇನೂ ಇಲ್ಲ; ಕೊನೆಗ ಎನ್‌ಡಿಎ ಸರಕಾರ ಇದನ್ನು ಮಾಡಿತು ಎಂದು ಮೋದಿ ಹೇಳಿದರು.
ಗುಜರಾತ್, ಛತ್ತೀಸ್‌ಗಢ, ಮಧ್ಯಪ್ರದೇಶ ಮೊದಲಾದೆಡೆ ಕೃಷಿಕರಿಗೆ ಅವರ ಕೃಷಿ ವೆಚ್ಚದ ಶೇ.60ನ್ನು ಸರಕಾರ ನೀಡುತ್ತದೆ; ಆದರೆ ಉತ್ತರ ಪ್ರದೇಶ ಸರಕಾರ ಕೇವಲ ಶೇ.3ನ್ನು ಮಾತ್ರವೇ ಕೃಷಿಕರಿಗೆ ನೀಡುತ್ತಿದೆ; ಉಳಿದದ್ದು ಮಾರುಕಟ್ಟೆಯ ಕೃಪೆಯಿಂದ ಸಿಗಬೇಕಾಗಿದೆ ಎಂದು ಮೋದಿ ಹೇಳಿದರು.
ಉತ್ತರ ಪ್ರದೇಶದಲ್ಲಿ ಫೆ.11, 15, 19, 23. 27 ಮತ್ತು ಮಾರ್ಚ್ 4 ಹಾಗೂ 8ರಂದು ಮತದಾನ ನಡೆಯಲಿದೆ. ಫೆ.11ಕ್ಕೆ ಮುನ್ನ ಮೋದಿ ಅವರು ಆಲಿಗಢದಲ್ಲಿ ಇನ್ನೂ ಒಂದು ರಾಲಿ ನಡೆಸಲಿದ್ದಾರೆ.