ಹೈದರಾಬಾದ್: ಮುಸ್ಲಿಮರಿಗೆ ಕೋಟಾದ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ರಾಜಕೀಯ ಜಗಳದ ನಡುವೆ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಮುಂದಿನ ದಿನಗಳಲ್ಲಿ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿಯನ್ನು ಸಂಪೂರ್ಣವಾಗಿ ತೆಗೆದುಹಾಕಲು ಬಿಜೆಪಿ ಯೋಜಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ತನ್ನ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ವರ್ಷವಾದ 2025 ರ ವೇಳೆಗೆ ಮೀಸಲಾತಿಯನ್ನು ರದ್ದುಗೊಳಿಸಲಿದೆ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.
2025ರ ವೇಳೆಗೆ ಆರ್‌ಎಸ್‌ಎಸ್ 100 ವರ್ಷ ಪೂರೈಸಲಿದೆ. 2025ರ ವೇಳೆಗೆ ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯನ್ನು ಕಿತ್ತು ಹಾಕಲು ಪ್ರಯತ್ನಿಸುತ್ತಿದ್ದಾರೆ. ಹಲವು ಬಾರಿ ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರು ಮೀಸಲಾತಿ ಕುರಿತು ಹೇಳಿದ್ದಾರೆ ಎಂದು ಗುರುವಾರ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಹೇಳಿದರು.
ಹಿಂದುಳಿದ ವರ್ಗಗಳಿಗೆ (ಬಿಸಿ) ಮೀಸಲಾತಿಯನ್ನು ಪ್ರಸ್ತಾಪಿಸಿದ ಮಂಡಲ್ ಆಯೋಗದ ವರದಿಯ ಅನುಷ್ಠಾನವನ್ನು ಬಿಜೆಪಿ ಈ ಹಿಂದೆ ಸ್ಥಗಿತಗೊಳಿಸಿತ್ತು ಎಂದು ಅವರು ಗಮನ ಸೆಳೆದರು.
ಎಸ್‌ಸಿ, ಎಸ್‌ಟಿ ಮತ್ತು ಬಿಸಿ ಸಮುದಾಯಗಳಿಗೆ ಕೋಟಾಗಳನ್ನು ರದ್ದುಗೊಳಿಸಲು ಸಂಸತ್ತಿನಲ್ಲಿ ಸಂಖ್ಯಾಬಲ ಹೊಂದಲು ಲೋಕಸಭೆ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲುವ ಬಿಜೆಪಿಯ ಗುರಿ ‘ಅಬ್ಕಿ ಬಾರ್ 400 ಪಾರ್’ ಎಂದು ರೆಡ್ಡಿ ಆರೋಪಿಸಿದರು.
“ಮೀಸಲಾತಿಯನ್ನು ರದ್ದುಪಡಿಸಲು ಪ್ರಯತ್ನಿಸುತ್ತಿರುವ ಬಿಜೆಪಿಯನ್ನು ಕೆಲವೇ ಜನರು ಬೆಂಬಲಿಸುತ್ತಿದ್ದಾರೆ. ಈ ಲೋಕಸಭಾ ಚುನಾವಣೆಗಳು ಎಸ್‌ಸಿ, ಎಸ್‌ಟಿ, ಬಿಸಿ ಮೀಸಲಾತಿಯ ಜನಾಭಿಪ್ರಾಯ” ಎಂದು ಅವರು ಹೇಳಿದರು.