Advertisement

ಮೀನುಗಾರರಿಗೆ ನೆರವಾಗಲಿದೆ ಬಿಜೆಪಿ ಆಡಳಿತ: ಯೋಗಿ

06:00 AM May 09, 2018 | |

ಕುಂದಾಪುರ: ಮೀನುಗಾರರ ಕಲ್ಯಾಣಕ್ಕೆ ಈವರೆಗೆ ಯಾವೊಂದೂ ಕಾರ್ಯಕ್ರಮ ಹಾಕಿಕೊಳ್ಳದ ಕಾಂಗ್ರೆಸ್‌ ಸರಕಾರವನ್ನು ಅಧಿಕಾರದಿಂದ ಇಳಿಸಿ. ಕರಾವಳಿ ತೀರದಲ್ಲಿ ಬಂದರು ಸ್ಥಾಪನೆ ಮಾಡುವ ಮೂಲಕ ಯುವಕರಿಗೆ, ಮೀನುಗಾರರಿಗೆ, ವ್ಯಾಪಾರಸ್ಥರಿಗೆ, ಪ್ರವಾಸೋದ್ಯಮಕ್ಕೆ ನೆರವಾಗಲು ಬಿಜೆಪಿ ಆಡಳಿತ ಬರುವಂತೆ ಮಾಡಿ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದರು. ಅವರು ತ್ರಾಸಿಯಲ್ಲಿ ಮಂಗಳವಾರ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎಂ. ಸುಕುಮಾರ ಶೆಟ್ಟಿ ಅವರ ಪರವಾಗಿ ಮತಯಾಚಿಸಿ ಮಾತನಾಡಿದರು.

Advertisement

ಜೆಹಾದಿ ಆಡಳಿತ
ರಾಮ ವನವಾಸಕ್ಕೆ ಹೋಗುವಾಗ ಆತನ ಜತೆಗಿದ್ದುದು ಮೀನುಗಾರ ನಿಷಧರಾಜ ಹಾಗೂ ಕರ್ನಾಟಕದಲ್ಲಿ ಜನಿಸಿದ ಅಂಜನಿಪುತ್ರ ಹನೂಮಂತ. ಅಂತಹ ರಾಮಾಯಣದ ಆದರ್ಶಗಳನ್ನು ಹೊಂದಿದ ರಾಜ್ಯ ಇದು. ಆದರೆ ಇಲ್ಲಿ ಕಾಂಗ್ರೆಸ್‌ನ ತುಷ್ಟೀಕರಣ ನೀತಿಯಿಂದ ಜನ ಬೇಸತ್ತಿದ್ದಾರೆ. ಹಿಂದೂಗಳ , ಬಿಜೆಪಿ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಈ ಮೂಲಕ ಕಾಂಗ್ರೆಸ್‌ ಸರಕಾರ ಜೆಹಾದಿ ಆಡಳಿತ ಮಾಡುತ್ತಿದೆ. ಹಿಂದೂ ಹೃದಯ ಸಾಮ್ರಾಟ ಶಿವಾಜಿ ಆದರ್ಶವಾಗುವ ಬದಲು  ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ ಮೂಲಕ ಸರಕಾರ ಬಹುಸಂಖ್ಯಾಕ‌ರನ್ನು ನಿರ್ಲಕ್ಷಿಸಿದೆ. ಜನರಿಗೆ ರಕ್ಷಣೆ ನೀಡಲು ಸರಕಾರ ವಿಫ‌ಲವಾಗಿದೆ. ಯುವಕರಿಗೆ ಸರಕಾರದ ಮೇಲೆ ನಂಬಿಕೆ ಇಲ್ಲ. ಸಮಗ್ರ ಅಭಿವೃದ್ಧಿ ಸಾಧ್ಯವಾಗಿಲ್ಲ ಎಂದರು.

ಫ‌ಲಾನುಭವಿ ಖಾತೆಗೆ
ರಾಜೀವ ಗಾಂಧಿಯವರು ಹೇಳಿದ, ಸರಕಾರ 100 ರೂ. ಕೊಟ್ಟರೆ ಫ‌ಲಾನುಭವಿಗೆ 15 ರೂ. ತಲುಪುತ್ತದೆ ಎನ್ನುವ ಮಾತಿನಲ್ಲಿ ಕಾಂಗ್ರೆಸ್‌ಗೆ ನಂಬಿಕೆಯಿದೆ. ಆದರೆ ಸರಕಾರ ನೂರು ರೂ. ಕೊಟ್ಟರೆ ನೂರು ರೂ. ಕೂಡಾ ತಲುಪುವಂತೆ ಮಾಡಿದ್ದು ಮೋದಿ ಸರಕಾರದ ಹೆಗ್ಗಳಿಕೆ. 38 ಕೋಟಿ ಜನಧನ್‌ ಖಾತೆ ಮೂಲಕ ಬಡವರು, ಎಸ್‌ಸಿ,ಎಸ್‌ಟಿ, ಕೃಷಿಕರ ಸಬ್ಸಿಡಿ, ಅನುದಾನವನ್ನು ನೇರವಾಗಿ ಜನರಿಗೆ ತಲುಪಿಸುತ್ತಿದ್ದಾರೆ. ಹಲವಾರು ಜನಕಲ್ಯಾಣ ಯೋಜನೆಗಳ ಮೂಲಕ ಕೇಂದ್ರ ಸರಕಾರ ಜನಸಾಮಾನ್ಯರ ಪಾಲಿಗೆ ವರದಾನವಾಗಿದೆ. ಪ್ರಧಾನಮಂತ್ರಿ ಆವಾಜ್‌ ಯೋಜನೆಯ ಮನೆಗಳನ್ನು ಕಾಂಗ್ರೆಸ್‌ ಸರಕಾರ ಮೀನುಗಾರರಿಗೆ, ಎಸ್‌ಸಿ, ಎಸ್‌ಟಿಗಳಿಗೆ ವಿತರಿಸದೇ , ಕೇಂದ್ರದ ಯೋಜನೆಗಳನ್ನು ರಾಜ್ಯದಲ್ಲಿ ಸಮರ್ಪಕ ಅನುಷ್ಠಾನ ಮಾಡದೇ ಜನರನ್ನು ವಂಚಿಸಿದೆ ಎಂದರು. 

ಕಾಂಗ್ರೆಸ್‌ ಎಟಿಎಂ
ಬಿಜೆಪಿ ಅಭಿವೃದ್ಧಿ ಕುರಿತು ಮಾತನಾಡುತ್ತದೆ. ಉತ್ತಮ ಸರಕಾರ ಕುರಿತು ಮಾತನಾಡುತ್ತದೆ. ಜನರ ಹಿತ, ಸುರಕ್ಷೆಯ ಕುರಿತು ಮಾತನಾಡುತ್ತದೆ. ಭೇದ ಭಾವ ಇಲ್ಲದ ಆಡಳಿತ ನೀಡುವ ಕುರಿತು ಮಾತನಾಡುತ್ತದೆ. ಆದರೆ ಕಾಂಗ್ರೆಸ್‌ ಟಿಪ್ಪು ಜಯಂತಿ ಬಗ್ಗೆ, ಜನರನ್ನು ಒಡೆದು ಆಳುವ ಕುರಿತು, ಜೆಹಾದಿ ತತ್ವದ ಕುರಿತು, ಭ್ರಷ್ಟಾಚಾರದ ಆಡಳಿತವೇ ಮಾತನಾಡುತ್ತದೆ. ಉತ್ತರ ಪ್ರದೇಶದಲ್ಲಿ 86 ಲಕ್ಷ ಕೃಷಿಕರ ಸಾಲ ಮನ್ನಾ ಮಾಡಲಾಗಿದೆ. 1 ವರ್ಷದಲ್ಲಿ 12 ಲಕ್ಷ ಬಡವರಿಗೆ ಮನೆ ಕಟ್ಟಿಸಿಕೊಡಲಾಗಿದೆ. ಶೌಚಾಲಯ, ವಿದ್ಯುತ್‌, ಉಚಿತ ಗ್ಯಾಸ್‌ ಎಂದು ಸೌಲಭ್ಯಗಳನ್ನು ಕೊಡಲಾಗಿದ್ದು ಮಾಫಿಯಾಗಳಿಗೆ ಕಡಿವಾಣ ಹಾಕಲಾಗಿದೆ. ಆದರೆ ಕಾಂಗ್ರೆಸ್‌ ಜನರ ದುಡ್ಡನ್ನು ಲೂಟಿ ಮಾಡಿ ಹೈಕಮಾಂಡಿಗೆ ತಲುಪಿಸುವ ಎಟಿಎಂ ಆಗಿದೆ ಎಂದರು.

ನಂ.1 ಕ್ಷೇತ್ರ
ಅಭ್ಯರ್ಥಿ ಬಿ.ಎಂ. ಸುಕುಮಾರ ಶೆಟ್ಟಿ, ಕಳೆದ 18 ವರ್ಷಗಳಿಂದ ಬೈಂದೂರು ಕ್ಷೇತ್ರ ಅಭಿವೃದ್ಧಿಯಾಗಿಲ್ಲ. ರಸ್ತೆ, ಶಾಲೆ, ಶಿಕ್ಷಣ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿಲ್ಲ. ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿಲ್ಲ. ಮೂಲಭೂತ ಸೌಕರ್ಯಗಳಿಲ್ಲದ ಕ್ಷೇತ್ರವಾಗಿದೆ. ನನಗೆ ಮತ ನೀಡಿದರೆ ಬೈಂದೂರು ಕ್ಷೇತ್ರವನ್ನು ರಾಜ್ಯದಲ್ಲಿ ನಂ.1 ಕ್ಷೇತ್ರವಾಗಿಸಿ ಅಭಿವೃದ್ಧಿಯಲ್ಲಿ ಮಾದರಿಯಾಗಿಸುತ್ತೇನೆ ಎಂದರು.  

Advertisement

ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ವಿಭಾಗ ಪ್ರಮುಖ್‌ ಉದಯ್‌ ಕುಮಾರ್‌ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ರವೀಂದ್ರ ಶೆಟ್ಟಿ, ಜಿ.ಪಂ. ಸದಸ್ಯರಾದ ಸುರೇಶ್‌ ಬಟ್ವಾಡಿ, ಶಂಕರ ಪೂಜಾರಿ, ವಂಡ್ಸೆ ಬಾಬು ಶೆಟ್ಟಿ, ಶೋಭಾ ಪುತ್ರನ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಧ್ಯಾ ರಮೇಶ್‌, ಮಹಿಳಾ ಮೋರ್ಚಾದ ಅಧ್ಯಕ್ಷೆ ಪ್ರಿಯದರ್ಶಿನಿ ದೇವಾಡಿಗ, ಯುವ ಮೋರ್ಚಾ ಅಧ್ಯಕ್ಷ ಶರತ್‌ ಕುಮಾರ್‌ ಶೆಟ್ಟಿ, ಕ್ಷೇತ್ರ ಪ್ರಭಾರಿ ಪ್ರವೀಣ್‌ ಗುರ್ಮೆ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ದೀಪಕ್‌ ಕುಮಾರ್‌ ಶೆಟ್ಟಿ, ಬಾಲಚಂದ್ರ ಭಟ್‌ ಉಪಸ್ಥಿತರಿದ್ದರು. ಮಂಡಲ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಸ್ವಾಗತಿಸಿದರು. ಯೋಗಿ ಆದಿತ್ಯನಾಥ್‌ ಅವರನ್ನು ಸಮ್ಮಾನಿಸಲಾಯಿತು. 

ಸಂಚಲನ ಮೂಡಿಸಿದ ಯೋಗಿ ಆಗಮನ
·  ಯೋಗಿ ಅವರ ಬರುವಿಕೆಗೆ ನಿರ್ಮಿಸಿದ ಹೆಲಿಪ್ಯಾಡ್‌ ಸಭಾಂಗಣದಿಂದ ಸುಮಾರು 1 ಕಿ.ಮೀ. ದೂರದಲ್ಲಿತ್ತು. 
·  ಯೋಗಿ ಆಗಮಿಸುತ್ತಿದ್ದಂತೆ, ನಿರ್ವಾಹಕರು ಅವರ ಹೆಸರು ಹೇಳುತ್ತಿದ್ದಂತೆ ಜನ “ಯೋಗಿ’, “ಯೋಗಿ’ ಎಂದು ಘೋಷಣೆ ಕೂಗಿದರು. 
·  ಸುಕುಮಾರ ಶೆಟ್ಟರು ಕೈ ಮುಗಿದು ಶಿರಬಾಗಿ ಮತಯಾಚಿಸಿದಾಗ ಜನ ಘೋಷಣೆ ಕೂಗಿದರು.
·  ಕೊಲ್ಲೂರು ಮೂಕಾಂಬಿಕೆ, ಹಟ್ಟಿಯಂಗಡಿ ವಿನಾಯಕ ಹಾಗೂ ಕಮಲಶಿಲೆ ದೇವರನ್ನು ಯೋಗಿ ಆರಂಭದಲ್ಲಿ ಸ್ಮರಿಸಿದರು. 
·  ಬಿಗು ಭದ್ರತೆ ಕೈಗೊಳ್ಳಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next