ವಿಜಯಪುರ: ರಾಜ್ಯದಲ್ಲಿ ಸಮಸ್ತ ಹಿಂದೂ ಸಮಾಜ ಮತ್ತು ರಾಯಣ್ಣ, ಅಂಬೇಡ್ಕರ್, ಬಾಬು ಜಗಜೀವನರಾಂ ಜನಾಂಗದಿಂದ ಹಿಡಿದು ಎಲ್ಲ ಜನಾಂಗದವರ ಅಭಿವೃದ್ಧಿಯು ಕುಂಠಿತವಾಗಿದೆ. ಎಸ್‌ಸಿಪಿ, ಟಿಎಸ್‌ಪಿಯ 14 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಿಡುಗಡೆ ಮಾಡಿದ್ದಾರೆ. ವಾಲ್ಮೀಕಿ ನಿಗಮದ 187 ಕೋಟಿಯಲ್ಲಿ 82 ಕೋಟಿ ಹಣ ತಿಂದು ಹಾಕಿದ್ದಾರೆ. ಈ ಪ್ರಕರಣದಲ್ಲಿ ನಾವು ಪಾದಯಾತ್ರೆ ಮಾಡಲು ಸಿದ್ಧವಿದ್ದೇವೆ. ನಮ್ಮ ಹೈಕಮಾಂಡ್ ಅನುಮತಿ ಕೊಟ್ಟರೆ, ಈಗಲೂ ನಾವು ಪಾದಯಾತ್ರೆ ಮಾಡುತ್ತೇವೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal)
ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಣದಲ್ಲಿ ಸುಮಾರು 11 ಸಾವಿರ ಕುಟುಂಬಗಳಿಗೆ ತಲಾ 1 ಲಕ್ಷ ರೂಪಾಯಿ ನೀಡಬಹುದಿತ್ತು. ಇದರಿಂದ ಆ ಕುಟುಂಬದವರು ತರಕಾರಿ ಮಾರಾಟ ಅಥವಾ ಆಟೋ ಖರೀದಿ ಮಾಡಿದರೂ ಸ್ವಂತ ಜೀವನ ಮಾಡಲು ಸಾಧ್ಯವಾಗುತ್ತಿತ್ತು. ಆದರೆ, ಈ ಎಲ್ಲ ಹಣವನ್ನು ಬಳ್ಳಾರಿ ಚುನಾವಣೆಗಾಗಿ ಹಾಕಿದ್ದಾರೆ. ಇದಕ್ಕೆಲ್ಲ ದಾಖಲೆಗಳಿವೆ. ಇದರ ವಿರುದ್ಧ ಪಾದಯಾತ್ರೆಗೆ ನಾವು ಅನುಮತಿ ಕೇಳುತ್ತಿದ್ದೇವೆ. ಹೈಕಮಾಂಡ್ ಇನ್ನೂ ಅನುಮತಿ ಕೊಟ್ಟಿಲ್ಲ ಎಂದರು.
ಅಲ್ಲದೇ, ಪಾದಯಾತ್ರೆ ವ್ಯಾಪ್ತಿಯನ್ನೂ ಹೆಚ್ಚಿಸಬೇಕು ಎಂದಿದ್ದೇವೆ. ಬೀದರ್ ನ ಬಸವಕಲ್ಯಾಣದಿಂದ ಬೆಂಗಳೂರಿನವರೆಗೂ ಪಾದಯಾತ್ರೆ ನಡೆಸುವ ಯೋಚನೆ ಇದೆ. ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳ ಮೂಲಕ ಬೆಂಗಳೂರಿಗೆ ತಲುಪಿ, ಅಲ್ಲಿ ದೊಡ್ಡ ರ‍್ಯಾಲಿ ಮಾಡುವ ವಿಚಾರವಿದೆ. ನಮ್ಮ ಹೈಕಮಾಂಡ್ ಅನುಮತಿ ಕೊಟ್ಟರೆ ನಿಶ್ಚಿತವಾಗಿ ಮಾಡುತ್ತೇವೆ. ಇತ್ತೀಚಿನ ಸಭೆಯಲ್ಲೂ ಮನವಿ ಮಾಡಿದ್ದೇವೆ. ಅದರ ಬಗ್ಗೆ ಇನ್ನೂ ಉತ್ತರ ಬಂದಿಲ್ಲ ಎಂದು ಮಾಹಿತಿ ನೀಡಿದರು.
ಈ ಪಾದಯಾತ್ರೆಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರೂ ಭಾಗವಹಿಸುತ್ತಾರಾ ಎಂಬ ಪ್ರಶ್ನೆಗೆ ಯತ್ನಾಳ, ಈ ಪಾದಯಾತ್ರೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂಬ ವಿಚಾರ ಬರುವುದಿಲ್ಲ. ಈ ಹಿಂದೆ ಸಿದ್ದರಾಮಯ್ಯ ಅಹಿಂದ ಮಾಡಿದಾಗ ನಾವು ಹೋಗಿದ್ದೆವು. ಹಿಂದುಳಿದವರು, ದಲಿತರಿಗಾಗಿ ಹೋಗಿದ್ದೇವು. ಈಗಲೂ ಸಿದ್ದರಾಮಯ್ಯ ನೇತೃತ್ವದಲ್ಲಿ ಎಲ್ಲ ಜನಾಂಗದವರಿಗೆ ನ್ಯಾಯ ಕೊಡುವ ಹೋರಾಟ ಮಾಡಿದರೆ, ನಾವು ಹೋಗಲು ಸಿದ್ಧರಿದ್ದೇವೆ. ಇದಕ್ಕೆ ಪಕ್ಷಾತೀತವಾಗಿ ಸಂಪೂರ್ಣವಾಗಿ ಬೆಂಬಲ ಕೊಡುತ್ತೇವೆ. ಇದರಲ್ಲಿ ಯಾವ ಪಕ್ಷವೂ ಬರುವುದಿಲ್ಲ ಎಂದರು.
ವಿಜಯೇಂದ್ರ ಗ್ರೇಟ್ ಲೀಡರ್, ಸ್ವಲ್ಪ ದಿನ ಕಾಯಿರಿ: ಪಕ್ಷದ ಆಂತರಿಕ ವಿಷಯಗಳನ್ನು ನಾನು ಮಾತನಾಡಲ್ಲ. ನಮ್ಮೊಂದು ಗುಂಪಿದೆ. ಅವರು ಉತ್ತರ ಕೊಡುತ್ತಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗ್ರೇಟ್ ಲೀಡರ್. ಹೀಗಾಗಿ ಸ್ವಲ್ಪ ದಿನ ಕಾಯಿರಿ. ಎಲ್ಲವೂ ಸರಿಯಾಗುತ್ತದೆ ಎಂದು ಯತ್ನಾಳ ಮಾರ್ಮಿಕವಾಗಿ ಹೇಳಿದರು.
ನೋ ಆರ್‌ಸಿಬಿ. ಇದೆಲ್ಲ ಸುಳ್ಳು: ಇದೇ ವೇಳೆ ಚೆನ್ನಮ್ಮ, ರಾಯಣ್ಣ ಬ್ರಿಗೇಡ್ (ಆರ್‌ಸಿಬಿ) ಸ್ಥಾಪನೆ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ನೋ ಆರ್‌ಸಿಬಿ. ಇದೆಲ್ಲ ಸುಳ್ಳು. ಈಶ್ವರಪ್ಪ ಅವರನ್ನು ಮರಳಿ ಬಿಜೆಪಿಗೆ ಸೇರಿಸಿಕೊಳ್ಳುವಂತೆ ನಾವು ಸಭೆ ಮಾಡಿಲ್ಲ. ಅವರನ್ನು ವಾಪಸ್ ಬಿಜೆಪಿಗೆ ಸೇರಿಸಿಕೊಳ್ಳುವ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದು. ಈಶ್ವರಪ್ಪ ಹಿಂದುಳಿದ ನಾಯಕರು. ಬಿಜೆಪಿಯಲ್ಲಿ ನಿಷ್ಠಾವಂತರಾಗಿ ಕೆಲಸ ಮಾಡಿದ್ದಾರೆ. ಅವರು ಯಾವುದೇ ಗದ್ದಲ ಮತ್ತು ಕೆಟ್ಟ ಕೆಲಸ ಮಾಡಿಲ್ಲ. ಪ್ರಧಾನಮಂತ್ರಿ ಫೋನ್ ಕರೆ ಮಾಡಿ ಕೇಳಿದರು ಎಂಬ ಕಾರಣಕ್ಕೆ ಅವರು ಶಿವಮೊಗ್ಗ ವಿಧಾನಸಭಾ ಕ್ಷೇತ್ರ ಬಿಟ್ಟುಕೊಟ್ಟರು. ಅವರಿಗೆ ಅವರದ್ದೇ ಆದ ಮೌಲ್ಯಗಳು ಇವೆ. ಅವರನ್ನು ಭೇಟಿಯಾಗಿದ್ದು ನಿಜ. ಅವರು ಬಿಜೆಪಿಗೆ ಬರಲಿ ಎಂದು ಬಯಸುತ್ತೇವೆ. ಆದರೆ, ಅಂತಿಮ ನಿರ್ಧಾರ ಹೈಕಮಾಂಡ್‌ನದ್ದು ಎಂದು ಸ್ಪಷ್ಟಪಡಿಸಿದರು.