Advertisement

ಕಾರ್ಯಕರ್ತರ ಶ್ರಮಕ್ಕೆ ಬಿಜೆಪಿ ಮನ್ನಣೆ: ನಳಿನ್‌

01:59 AM Jun 24, 2020 | Hari Prasad |

ಮಂಗಳೂರು: ಕಾರ್ಯಕರ್ತರ ಶ್ರಮ, ಪಕ್ಷ ನಿಷ್ಠೆಯನ್ನು ಬಿಜೆಪಿ ಗುರುತಿಸಿ ಅವರಿಗೆ ಸೂಕ್ತ ಅವಕಾಶಗಳನ್ನು ನೀಡುತ್ತದೆ.

Advertisement

ಇತ್ತೀಚೆಗೆ ರಾಜ್ಯಸಭೆ ಹಾಗೂ ವಿಧಾನಪರಿಷತ್‌ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆ ಇದಕ್ಕೆ ನಿದರ್ಶನ ಎಂದು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಧಾನಪರಿಷತ್‌ಗೆ ಆಯ್ಕೆಯಾಗಿರುವ ಪ್ರತಾಪಸಿಂಹ ನಾಯಕ್‌, ಕಿಯೋನಿಸ್ಕ್ ನೂತನ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ‌, ಮುಡಾ ಅಧ್ಯಕ್ಷ ರವಿಶಂಕರ್‌ ಮಿಜಾರು ಅವರಿಗೆ ಅಭಿನಂದನೆ ಮತ್ತು ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ್‌ ಮುಖರ್ಜಿ ಅವರ ಬಲಿದಾನ ದಿನ ಸಂಸ್ಮರಣೆ ಹಾಗೂ ರಾಜ್ಯದಲ್ಲಿ ಜನಸಂಘದ ಹಿರಿಯ ನಾಯಕರಾಗಿದ್ದ ಜಗನ್ನಾಥ ರಾವ್‌ ಜೋಶಿ ಅವರ ಜನ್ಮಶತಾಬ್ದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಅಭಿನಂದನೆಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಪ್ರತಾಪಸಿಂಹ ನಾಯಕ್‌ ಅವರು, ದ.ಕ. ಜಿಲ್ಲೆಯಲ್ಲಿ ಬಿಜೆಪಿ ಭವ್ಯ ಇತಿಹಾಸವನ್ನು ಹೊಂದಿದೆ. ಕಾರ್ಯಕರ್ತರ ಪ್ರೀತಿ, ಅಭಿಮಾನ, ನಾಯಕರು ನಮ್ಮ ಮೇಲಿಟ್ಟಿರುವ ವಿಶ್ವಾಸದಿಂದ ನಮಗೆ ಈ ಜವಾಬ್ದಾರಿ ದೊರಕಿದೆ. ಇದಕ್ಕೆ ಚ್ಯುತಿಯಾಗದಂತೆ ನಾವು ಕಾರ್ಯನಿರ್ವಹಿಸುತ್ತೇವೆ ಎಂದರು.

ಸಂಭ್ರಮದ ದಿನಗಳು
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್‌ ಎಂ. ಅವರು ಮಾತನಾಡಿ, ಜಿಲ್ಲಾ ಬಿಜೆಪಿಗೆ ಸಂಭ್ರಮದ ದಿನಗಳಿವು. ಸಾಮಾನ್ಯ ಕಾರ್ಯಕರ್ತನ ಮಟ್ಟದಿಂದ ಸಂಸದನಾಗಿ ಆಯ್ಕೆಯಾಗಿದ್ದ ನಳಿನ್‌ ಕುಮಾರ್‌ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೇರಿ ಪಕ್ಷದಲ್ಲಿ ಹೊಸ ಅಲೆಯನ್ನು ಹುಟ್ಟುಹಾಕಿದ್ದಾರೆ.

Advertisement

ಪ್ರತಾಪಸಿಂಹ ನಾಯಕ್‌, ರವಿಶಂಕರ ಮಿಜಾರು ಹಾಗೂ ಹರಿಕೃಷ್ಣ ಬಂಟ್ವಾಳ ಅವರಿಗೆ ನೀಡಿರುವ ಸ್ಥಾನ ಪಕ್ಷವು ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಮನ್ನಣೆ ನೀಡುತ್ತದೆ ಎಂಬುದಕ್ಕೆ ನಿದರ್ಶನ ಎಂದರು.

ಶಾಸಕರಾದ ಸಂಜೀವ ಮಠಂದೂರು, ರಾಜೇಶ್‌ ನಾೖಕ್‌, ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ, ಹರೀಶ್‌ ಪೂಂಜ, ಬಿಜೆಪಿ ವಿಭಾಗ ಪ್ರಭಾರಿ ಉದಯ ಕುಮಾರ್‌ ಶೆಟ್ಟಿ, ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್‌ ದಿವಾಕರ ಪಾಂಡೇಶ್ವರ, ಉಪಮೇಯರ್‌ ವೇದಾವತಿ ಉಪಸ್ಥಿತರಿದ್ದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್‌ ಬಂಟ್ವಾಳ ಸ್ವಾಗತಿಸಿದರು. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ವಂದಿಸಿದರು. ಸುಧೀರ್‌ ಶೆಟ್ಟಿ ಕಣ್ಣೂರು ನಿರೂಪಿಸಿದರು.

ಕೊಟ್ಟ ಮಾತು, ಇಟ್ಟ ವಿಶ್ವಾಸ
ಬಿಜೆಪಿಗೆ ಬಂದ ಶಾಸಕರಿಗೆ ಹಾಗೂ ಹರಿಕೃಷ್ಣ ಬಂಟ್ವಾಳ ಅವರಿಗೆ ಸೂಕ್ತ ಸ್ಥಾನ ಕಲ್ಪಿಸುವ ಮೂಲಕ ಕೊಟ್ಟ ಮಾತನ್ನು ಪಕ್ಷ ಉಳಿಸಿಕೊಂಡಿದೆ. ಇದೇ ವೇಳೆ ಕಾರ್ಯಕರ್ತರಿಗೂ ಸ್ಥಾನಗಳನ್ನು ನೀಡುವ ಮೂಲಕ ಕಾರ್ಯಕರ್ತರು ಪಕ್ಷದ ಮೇಲೆ ಇಟ್ಟಿರುವ ವಿಶ್ವಾಸವನ್ನು ಕಾಯ್ದುಕೊಳ್ಳುವ ಕಾರ್ಯ ಮಾಡಲಾಗಿದೆ ಎಂದು ನಳಿನ್‌ ಕುಮಾರ್‌ ಹೇಳಿದರು. 8 ವಿಧಾನಸಭಾ ಕ್ಷೇತ್ರಗಳಿರುವ ದ.ಕ. ಜಿಲ್ಲೆಯಲ್ಲಿ ಬಿಜೆಪಿ 7 ಶಾಸಕರನ್ನು ಹೊಂದಿದೆ. ಇದೀಗ ಪ್ರತಾಪಸಿಂಹ ನಾಯಕರು ವಿಧಾನಪರಿಷತ್‌ಗೆ ಆಯ್ಕೆಗೊಳ್ಳುವುದರೊಂದಿಗೆ 8 ಶಾಸಕರನ್ನು ಹೊಂದಿದಂತಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next