ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ, ಅನರ್ಹತೆಗೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ಬುಧವಾರ ಪ್ರಕಟಿಸಿದ ಮಧ್ಯಂತರ ತೀರ್ಪನ್ನು ಬಿಜೆಪಿ ರಾಜ್ಯ ನಾಯಕರು ಸ್ವಾಗತಿಸಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.
ಸುಪ್ರೀಂಕೋರ್ಟ್‌ನ ಮಧ್ಯಂತರ ತೀರ್ಪಿನಿಂದಾಗಿ ಅತೃಪ್ತ ಶಾಸಕರು ನಿರಾಳರಾಗಿದ್ದಾರೆ ಎಂಬ ಮಾಹಿತಿ ಸಿಗುತ್ತಿದ್ದಂತೆ ರಾಜ್ಯ ಬಿಜೆಪಿ ನಾಯಕರ ಆತ್ಮವಿಶ್ವಾಸ ಹೆಚ್ಚಾಯಿತು. ಅದರ ಬೆನ್ನಲ್ಲೇ ಮುಂಬೈನಲ್ಲಿ ನೆಲೆಸಿರುವ ಅತೃಪ್ತ ಶಾಸಕರು ಗುರುವಾರ ವಿಶ್ವಾಸಮತ ಯಾಚನೆ ವೇಳೆ ಕಲಾಪಕ್ಕೆ ಹಾಜರಾಗುವುದಿಲ್ಲ ಎಂದು ಪ್ರಕಟಿಸಿದ್ದು, ಬಿಜೆಪಿ ನಾಯಕರ ಸಂತಸವನ್ನು ಇಮ್ಮಡಿಗೊಳಿಸಿತು.
ಸುಪ್ರೀಂಕೋರ್ಟ್ ತೀರ್ಪು ಕುರಿತು ನಗರದಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸುಪ್ರೀಂಕೋರ್ಟ್‌ನ ಮಧ್ಯಂತರ ತೀರ್ಪು ಪ್ರಜಾಪ್ರಭುತ್ವದ ಗೆಲುವಾಗಿದೆ. ಮೈತ್ರಿ ಸರ್ಕಾರ ಪತನವಾಗುವುದು ಖಚಿತ ಎಂದು ಹೇಳಿದರು.
ಈ ತೀರ್ಪು ಅತೃಪ್ತ ಶಾಸಕರ ನೈತಿಕ ಗೆಲುವಾಗಿದೆ. ರಾಜೀನಾಮೆ ಬಗ್ಗೆ ಶೀಘ್ರವಾಗಿ ತೀರ್ಮಾನ ಕೈಗೊಂಡು ಮಾಹಿತಿ ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. 15 ಅತೃಪ್ತ ಶಾಸಕರಿಗೆ “ವಿಪ್’ ಅನ್ವಯವಾಗುವುದಿಲ್ಲ. ಸದನಕ್ಕೆ ಬರುವಂತೆ ಅತೃಪ್ತ ಶಾಸಕರನ್ನು ಒತ್ತಾಯ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ ಎಂದು ತಿಳಿಸಿದರು.
ಸಿಎಂ ರಾಜೀನಾಮೆ ನೀಡಲಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರಿಗೆ ಹಿನ್ನಡೆಯಾಗಿದೆ. ಹಾಗಾಗಿ, ಅವರು ವಿಶ್ವಾಸಮತ ಯಾಚನೆಯನ್ನು ಕೈಬಿಟ್ಟು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ಸುಪ್ರೀಂಕೋರ್ಟ್ ತೀರ್ಪನ್ನು ಬಿಜೆಪಿ ಸ್ವಾಗತಿಸುತ್ತದೆ. ಜತೆಗೆ, ರಾಜ್ಯದ ಜನ ಕೂಡ ಸ್ವಾಗತಿಸುತ್ತಾರೆ. ರಾಜ್ಯದ ಜನರ ಮನಸ್ಸಿನಲ್ಲಿನ ಭಾವನೆಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದಂತಿದೆ.
ಹಾಗಾಗಿ, ಮುಖ್ಯಮಂತ್ರಿಗಳು ವಿಶ್ವಾಸಮತ ಯಾಚಿಸದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಬಿಜೆಪಿಯ ಹಲವು ನಾಯಕರು ಸುಪ್ರೀಂಕೋರ್ಟ್‌ನ ಮಧ್ಯಂತರ ತೀರ್ಪನ್ನು ಸ್ವಾಗತಿಸಿದ್ದು, ಕಮಲ ಪಾಳಯದಲ್ಲಿ ಸರ್ಕಾರ ರಚನೆ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ.