ರಾಮನಗರ: 104 ಸೀಟುಗಳನ್ನು ಪಡೆದಿರುವ ಕುಂತಿ ಮಕ್ಕಳು ನಾವು ಅಧಿಕಾರ ವಂಚಿತರಾಗಿದ್ದೇವೆ. ಆದರೆ, ಕನಕಪುರದ ದುಶ್ಯಾಸನ (ಡಿ.ಕೆ.ಶಿವಕುಮಾರ್), ದುರ್ಯೋಧನ (ಎಚ್.ಡಿ.ಕೆ) ಒಗ್ಗಟ್ಟಾಗಿ ಅಧಿಕಾರ ಕಬಳಿಸಿದ್ದಾರೆ. ಇವರದ್ದು ಅನುಪಮ ಜೋಡಿ ಎಂದು ಲೇವಡಿಯಾಡಿದರು. ಅನೀತಿ, ಅಧರ್ಮದ ಈ ಸರ್ಕಾರ ಕೊನೆಗೊಳ್ಳುವ ಸಮಯ ಬಂದಿದೆ ಎಂದು ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್ ಹೇಳಿದರು.
ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕ ಹಮ್ಮಿಕೊಂಡಿರುವ ಕೆಂಗಲ್‌ನಿಂದ ಬೆಂಗಳೂರಿಗೆ ಪಾದಯಾತ್ರೆಗೆ ರಾಮನಗರ-ಚನ್ನಪಟ್ಟಣ ಗಡಿಯಲ್ಲಿರುವ ಕೆಂಗಲ್ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕಣ್ಣೀರು ಸುರಿಸುವ ನಾಟಕ ಬಿಟ್ಟು ರೈತರ ಕಣ್ಣೀರು ಒರೆಸುವತ್ತ ಗಮನ ಹರಿಸಬೇಕು. ಕೇವಲ ಸುಸ್ತಿ ಸಾಲ ಮನ್ನಾ ಮಾಡಿದ್ದ ಮುಖ್ಯಮಂತ್ರಿಗಳ ವಿರುದ್ಧ ಬಿ.ಎಸ್.ಯಡಿಯೂರಪ್ಪ ಘರ್ಜಿಸಿದ್ದಕ್ಕೆ ಅವರು ಚಾಲ್ತಿ ಸಾಲ ಮನ್ನಾ ಮಾಡಿದ್ದಾರೆ ಎಂದು ಹೇಳಿದರು.
ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಲೋಕಸಭಾ ಚುನಾವಣೆಗೂ ಮುನ್ನವೇ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಪಥನ ಗೊಳ್ಳಲಿದ್ದು, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವ ಎಲ್ಲಾ ಮುನ್ಸೂಚನೆಗಳು ಇವೆ. ಕೆಂಗಲ್ ಆಂಜನೇಯ ಸ್ವಾಮಿ ಸನ್ನಿಧಿಯಿಂದ ಸಮ್ಮಿಶ್ರ ಸರ್ಕಾರದ ವಿರುದ್ಧ ಧರ್ಮಯುದ್ಧ ಆರಂಭವಾಗಿದೆ. ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆದ ವೇಳೆ ಈ ಯುದ್ಧ ಸಮಾಪ್ತಿಯಾಗಲಿದೆ ಎಂದರು.
ರೈತರ ಎಲ್ಲಾ ಸಾಲ ಮನ್ನಾ ಭರವಸೆ ಹುಸಿ: ತಾವು ಅಧಿಕಾರಕ್ಕೆ ಬಂದರೆ, ರೈತರ ಎಲ್ಲಾ ರೀತಿಯ ಸಾಲ ಮನ್ನಾ ಮಾಡುವುದಾಗಿ ಚುನಾವಣೆಗೂ ಮುನ್ನ ಕುಮಾರಸ್ವಾಮಿ ಅವರು ಆಶ್ವಾಸನೆ ನೀಡಿದ್ದರು. ಅವರೀಗ ಅಧಿಕಾರದಲ್ಲಿದ್ದಾರೆ. ರೈತಾಪಿ ವರ್ಗ ಇರಿಸಿಕೊಂಡಿದ್ದ ನಿರೀಕ್ಷೆ ಹುಸಿಯಾಗಿದೆ.ಸ್ತ್ರೀ ಶಕ್ತಿ ಸಂಘಗಳ ಸಾಲವನ್ನು ಮನ್ನಾ ಮಾಡುವ ವಾಗªನವನ್ನು ಮರೆತ್ತಿದ್ದಾರೆ ಎಂದರು.
ಒಬ್ಬ ರೈತನಿಗೂ ತಲುಪದ ಋಣ ಮುಕ್ತ ಪತ್ರ: ಬಿಜೆಪಿ ರಾಜ್ಯ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಮಾಡಿದ್ದ ಸಾಲ ಮನ್ನಾದ ಪೈಕಿ ಇನ್ನು 4 ಸಾವಿರ ಕೋಟಿ ರೂ. ಸಹಕಾರ ಬ್ಯಾಂಕುಗಳಿಗೆ ತಲುಪಿಲ್ಲ. ಸಿಎಂ ಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡು 2 ತಿಂಗಳಾದರು ಒಬ್ಬನೇ ಒಬ್ಬ ರೈತನ ಮನೆಗೆ ಋಣ ಮುಕ್ತ ಪತ್ರ ತಲುಪಿಲ್ಲ ಎಂದರು.
ಬಡ ಪೋಷಕರು ಸಾಲ, ಶೂಲ ಮಾಡಿ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಿದ್ದಾರೆ. ಹೀಗಾಗಿ ಸರ್ಕಾರಿ, ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ಕೊಡಬೇಕು ಎಂದು ರೈತ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಆಗ್ರಹಿಸಿದರು.