ಬೆಂಗಳೂರು: ಲೋಕಸಭೆ ಚುನಾವಣೆ ತಯಾರಿಗೆ ಅಧಿಕೃತವಾಗಿ ಚಾಲನೆ ನೀಡಲು ಸಿದ್ಧತೆ ಮಾಡಿಕೊಂಡಿರುವ ಬಿಜೆಪಿಯು ಸೋಮವಾರ ಬೆಂಗಳೂರಿನ ಹೊರವಲಯದಲ್ಲಿ ಲೋಕಸಭಾ “ಚುನಾವಣ ಯೋಜನೆ ಸಭೆ” ನಡೆಸಲಿದೆ.
ಇದಕ್ಕಾಗಿ ರವಿವಾರವೇ ದಿಲ್ಲಿಯಿಂದ ಆಗಮಿಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಮೇಲ್ಮನೆ ಸದಸ್ಯ ಕೇಶವಪ್ರಸಾದ್ ಮತ್ತಿತರರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.
ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5ರ ವರೆಗೆ ಸಭೆ ನಡೆಯಲಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಸಮ್ಮುಖದಲ್ಲಿ ಸಭೆಗೆ ಚಾಲನೆ ಸಿಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಲೋಕಸಭಾ ಚುನಾವಣ ಯೋಜನೆ ಸಭೆಯನ್ನು “ವಿಜಯ ಸಿದ್ಧತ ಸಭೆ’ ಎಂದು ಬಿಜೆಪಿ ವ್ಯಾಖ್ಯಾನಿಸಿದೆ.
ಮಾಜಿ ಸಿಎಂಗಳಾದ ಯಡಿಯೂರಪ್ಪ, ಸದಾನಂದ ಗೌಡ, ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿಪಕ್ಷದ ನಾಯಕ ಆರ್. ಅಶೋಕ್, ಮೇಲ್ಮನೆ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸಹಿತ 54 ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
ಸಭೆಯಲ್ಲಿ ಲೋಕಸಭೆ ಚುನಾವಣೆಯ ರೂಪು ರೇಷೆಗಳ ಬಗ್ಗೆ ಚರ್ಚೆ ಆಗಲಿದೆ. ಪ್ರತೀ ಕ್ಷೇತ್ರದಲ್ಲಿ ಪಕ್ಷಕ್ಕಿರುವ ಪ್ರಾಬಲ್ಯ ಮತ್ತು ದೌರ್ಬಲ್ಯ, ಹಾಲಿ ಸಂಸದರಿರುವ ಕ್ಷೇತ್ರ ಮತ್ತು ಸೋತಿರುವ ಕ್ಷೇತ್ರಗಳ ಅವಲೋಕನವೂ ನಡೆಯಲಿದೆ.
ಲೋಕಸಭಾ ಚುನಾವಣೆ ತಯಾರಿ ಗಾಗಿ, ಪ್ರವಾಸಕ್ಕಾಗಿ ಎಲ್ಲರನ್ನೂ ಭೇಟಿ ಯಾಗುವುದಕ್ಕೆ ಬಂದಿ ದ್ದೇನೆ. ಮೋದಿ ನೇತೃತ್ವ ದಲ್ಲಿ ಎಲ್ಲ 28 ಕ್ಷೇತ್ರ ಗಳನ್ನು ಗೆಲ್ಲುವ ಪ್ರಯತ್ನ ದಲ್ಲಿದ್ದೇವೆ. ವಿಜಯೇಂದ್ರ ನೇತೃತ್ವದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯಗಳು ನಡೆಯುತ್ತಿವೆ.
– ಅರುಣ್ ಸಿಂಗ್, ರಾಜ್ಯ ಬಿಜೆಪಿ ಉಸ್ತುವಾರಿ