Advertisement

Mysuru Chalo; ಯತ್ನಾಳ್‌, ಜಾರಕಿಹೊಳಿ ವಿರುದ್ಧ ಬಿಜೆಪಿ ಅಸಮಾಧಾನ

12:14 AM Jul 30, 2024 | Team Udayavani |

ಬೆಂಗಳೂರು: ಮೈಸೂರು ಚಲೋದಲ್ಲಿ ಭಾಗಿಯಾಗುವುದಿಲ್ಲ ಎನ್ನುತ್ತಿರುವ ಮಾಜಿ ಸಚಿವರಾದ ರಮೇಶ್‌ ಜಾರಕಿಹೊಳಿ, ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ನಿರ್ಧಾರಕ್ಕೆ ಪಕ್ಷದೊಳಗೆ ಅಸಮಾಧಾನ ಆರಂಭವಾಗಿದೆ.

Advertisement

ಮುಡಾದಿಂದ ಸಿಎಂ ಕುಟುಂಬಕ್ಕೆ ನಿವೇಶನ ಹಂಚಿಕೆ, ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಸೇರಿ ಹಲವು ವಿಷಯಗಳನ್ನು ಇಟ್ಟುಕೊಂಡು ಆ. 3ರಿಂದ ಬೆಂಗಳೂರು-ಮೈಸೂರು ನಡುವೆ ಪಾದಯಾತ್ರೆ ನಡೆಸಲು ಬಿಜೆಪಿ ನಿರ್ಧರಿಸಿದೆ.

ಇದಕ್ಕೆ ವ್ಯತಿರಿಕ್ತವಾಗಿ ವಾಲ್ಮೀಕಿ ಹಗರಣವನ್ನಿಟ್ಟು ಕೊಂಡು ಬಳ್ಳಾರಿಗೆ ಪಾದಯಾತ್ರೆ ನಡೆಸುವುದಾಗಿ ರಮೇಶ್‌ ಹಾಗೂ ಯತ್ನಾಳ್‌ ಹೇಳಿಕೆ ನೀಡಿದ್ದು, ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧವೂ ಹರಿಹಾಯ್ದಿದ್ದಾರೆ. ಇನ್ನೊಂದೆಡೆ ಸದನದಲ್ಲಿ ನಡೆದ ಹೋರಾಟವನ್ನು “ಹೊಂದಾಣಿಕೆ ಹೋರಾಟ’ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಕೂಡ ಜರೆದಿದ್ದಾರೆ. ಇದೆಲ್ಲವೂ ಪಕ್ಷದೊಳಗೆ ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವರ ಪಾದಯಾತ್ರೆ ಪಕ್ಷಕ್ಕೆ ಬಲ
ಈ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ನಾವು ಕಾಟಾಚಾರಕ್ಕೆ ಪಾದಯಾತ್ರೆ ಮಾಡುತ್ತಿಲ್ಲ. ಜತ ಹಿತಕ್ಕಾಗಿ ಮಾಡುತ್ತಿದ್ದೇವೆ. ಯತ್ನಾಳ್‌ ಹಾಗೂ ಜಾರಕಿಹೊಳಿ ಅವರ ಪಾದಯಾತ್ರೆಯಿಂದ ನಮ್ಮ ಪಕ್ಷಕ್ಕೆ ಬಲ ಬರಲಿದೆ, ಮಾಡಲಿ ಎಂದಷ್ಟೇ ಹೇಳಿದ್ದಾರೆ.

ಜನರ ಹಿತಾಸಕ್ತಿಗಾಗಿ
ಇದೇ ವಿಚಾರವಾಗಿ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಪ್ರತಿಕ್ರಿಯಿಸಿದ್ದು, ಒಳ್ಳೆಯ ರೀತಿಯಲ್ಲಿ ಹೋರಾಟ ಕೈಗೆತ್ತಿಕೊಳ್ಳಬೇಕು ಎಂದು ಬಿಜೆಪಿ ತೀರ್ಮಾನಿಸಿದೆ. ಈ ಬಾರಿಯ ಹೋರಾಟ ತಾರ್ಕಿಕ ಅಂತ್ಯ ಕಾಣಲಿದೆ. ಸಿದ್ದರಾಮಯ್ಯರ ಬಳ್ಳಾರಿ ಪಾದಯಾತ್ರೆಯಂತೆ ಯಾವುದೋ ರಾಜಕೀಯ ಲಾಭಕ್ಕಾಗಿ ಮಾಡುತ್ತಿಲ್ಲ. ಜನರ ಹಿತಾಸಕ್ತಿಗಾಗಿ ನಡೆಯುತ್ತಿರುವ ನೈಜ ಹೋರಾಟ. ಈ ಹೋರಾಟದಲ್ಲಿ ಭಾಗಿಯಾಗದಿದ್ದರೆ ವಿಪಕ್ಷದ ಕಾರ್ಯಕರ್ತರಾಗಿರಲು ಸಾಧ್ಯವಿಲ್ಲ.

Advertisement

ಜಾರಕಿಹೊಳಿ, ಯತ್ನಾಳ್‌ ಅಪಸ್ವರ ಎತ್ತಿದರೆ ಕದ್ದವರು ತಪ್ಪಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಅರವಿಂದ ಲಿಂಬಾವಳಿ ಹೇಳಿಕೆ ಸರಿಯಿದೆ. ಬಿಜೆಪಿ-ಜೆಡಿಎಸ್‌ ಹೊಂದಾಣಿಕೆ ಹೋರಾಟ ಎಂಬ ಅರ್ಥದಲ್ಲಿ ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಭ್ರಷ್ಟಾಚಾರದ ವಿರುದ್ಧ ನಮ್ಮದು ಶೂನ್ಯಸಹನೆ
ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಪ್ರಕ್ರಿಯಿಸಿ, ಭ್ರಷ್ಟಾಚಾರ ಬಯಲಿಗೆಳೆಯುವ ಸದುದ್ದೇಶ ಇಟ್ಟುಕೊಂಡು ಪಾದಯಾತ್ರೆ ಮಾಡುತ್ತಿದ್ದೇವೆ. ಭ್ರಷ್ಟಾಚಾರದ ವಿರುದ್ಧ ನಮ್ಮದು ಶೂನ್ಯಸಹನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next