ಹುಬ್ಬಳ್ಳಿ: ರಾಜ್ಯ ಸರಕಾರ ಪತನವಾಗಲಿದೆ ಎಂಬ ಭ್ರಮೆಯಲ್ಲಿ ಬಿಜೆಪಿ ಇದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಆ ಪಕ್ಷಕ್ಕೇನು ನೈತಿಕತೆ ಇದೆ ಎಂದು ಮಾಜಿ ಸಿಎಂ, ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಪ್ರಶ್ನಿಸಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿದೆ ಮುಳಗಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಗೆ ಮಾತನಾಡಲು ವಿಷಯವೇ ಇಲ್ಲವಾಗಿದೆ. ಹಿಂದೆ 40 ಪರ್ಸೆಂಟ್ ಸರಕಾರ ಎಂದು ಆರೋಪ ಮಾಡಿದಾಗ ಅದರಿಂದ ಹೊರ ಬರಲು ಸಾಧ್ಯವಾಗದೇ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು.ಬಿಜೆಪಿಯವರೇನು ಸತ್ಯ ಹರಿಶ್ಚಂದ್ರರಾ? ಚುನಾವಣೆಗೆ ಅವರಿಗೆ ದುಡ್ಡು ಎಲ್ಲಿಂದ ಬರುತ್ತೆ ಎನ್ನುವುದನ್ನು ಮೊದಲು ತಿಳಿಸಲಿ ಎಂದರು.
ಈಡಿಗ ಸಮಾವೇಶ ರಾಜಕೀಯ ಪ್ರೇರಿತ ಎಂದ ಕಾಂಗ್ರೆಸ್ ನಾಯಕ ಬಿ.ಕೆ .ಹರಿಪ್ರಸಾದ್ ಅಸಮಾಧಾನ ವಿಚಾರ ಕುರಿತು ಮಾತನಾಡಿ, ಅವರು ಒಂದು ಪಕ್ಷದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷರು ಕಾಳಜಿ ತೆಗೆದುಕೊಳ್ಳುತ್ತಾರೆ. ಅವರನ್ನು ಕರೆದು ಮಾತನಾಡಿಸಿ ಸರಿ ಮಾಡುವ ಕೆಲಸ ಮಾಡುತ್ತಾರೆ. ರಾಜಕಾರಣ ಅಂದರೆ ಹಾಗೆ, ಏನು ಮಾಡಲಿಕ್ಕಾಗುವುದಿಲ್ಲ. ಅವರವರ ವೈಯಕ್ತಿಕ ಅಭಿಪ್ರಾಯಕ್ಕೆ ಉತ್ತರಿಸಲು ಸಾಧ್ಯವಿಲ್ಲ.ಅಂತಹ ಯಾವುದೇ ಸಮಸ್ಯೆ ಇದ್ದರೂ ಸಿಎಂ, ಡಿಸಿಎಂ ಸರಿಪಡಿಸಲಿದ್ದಾರೆ. ರಾಜಕಾರಣದಲ್ಲಿ ಯಾವಾಗ ಏನಾಗುತ್ತೆ ಅನ್ನೋದು ಗೊತ್ತಾಗಲ್ಲ” ಎಂದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ಪರಿವರ್ತನೆ ಆಗಿದ್ದಾರೆ. ಬಿಜೆಪಿಯವರು ಅಧಿಕಾರ ಕಳೆದುಕೊಂಡ ಬಿಜೆಪಿಯವರು ನೀರಿನಿಂದ ಹೊರ ಬಿದ್ದ ಮೀನು ಒದ್ದಾಡುವ ರೀತಿ ಒದ್ದಾಡ್ತಾ ಇದ್ದಾರೆ. ಮೊದಲು ಬಿಜೆಪಿಯವರು ತಮ್ಮ ಮನೆಯನ್ನು ಸರಿಪಡಿಸಿಕೊಳ್ಳಲಿ.ಬಿಜೆಪಿಯಲ್ಲಿ ಯಾರೇ ಅಧ್ಯಕ್ಷರು, ವಿಧಾನಸಭೆ ವಿಪಕ್ಷ ನಾಯಕ ಆದರೂ ರಿಪೇರಿ ಮಾಡದಷ್ಟು ಹದಗೆಟ್ಟು ಹೋಗಿದೆ. ಅದನ್ನ ರಿಪೇರಿ ಮಾಡಲು ಸಾಧ್ಯವೇ ಇಲ್ಲ. ಅದರ ಪರಿಣಾಮ ಈಗ ನಾವು ನೋಡುತ್ತಿದ್ದೇವೆ .ವಿಧಾನ ಪರಿಷತ್ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿಗೆ ಇನ್ನೂ ಸಾಧ್ಯವಾಗಿಲ್ಲ.ಇದರಿಂದ ಬಿಜೆಪಿ ಸ್ಥಿತಿ ಎಲ್ಲಿಗೆ ಬಂದು ನಿಂತಿದೆ ಎಂಬುದು ತಿಳಿಯುತ್ತಿದೆ ಎಂದು ಲೇವಡಿ ಮಾಡಿದರು.