ಬೆಂಗಳೂರು: ಒಂದು ಕಡೆ ಹಿಂದುತ್ವದ ಪ್ರತಿಪಾದನೆ ಮಾಡುವ ಬಿಜೆಪಿ ಮತ್ತೊಂದೆಡೆ ಪಿಎಫ್ಐ, ಎಸ್ ಡಿಪಿಐ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಹೈದರಾಬಾದ್ ನಲ್ಲಿ ಬಿಜೆಪಿ ಮುಖಂಡರು ಅಸಾದುದ್ದೀನ್ ಓವೈಸಿ ಜೊತೆ ಗುಪ್ತ ಮಾತುಕತೆ ನಡೆಸಿರುವ ಬಗ್ಗೆ ಮಾಹಿತಿ ನನಗಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಧಿಕಾರ ಹಿಡಿಯಲು ಬಿಜೆಪಿಯವರು ಏನೂ ಬೇಕಾದರೂ ಮಾಡುತ್ತಾರೆ. ಉತ್ತರಪ್ರದೇಶದಲ್ಲಿಯೂ ಕೂಡಾ ಅವರು ಇದೇ ತಂತ್ರಗಾರಿಕೆ ಉಪಯೋಗಿಸಿ ಅಧಿಕಾರದ ಗದ್ದುಗೆ ಏರಿದ್ದಾರೆ ಎಂದು ದೂರಿದರು.
ಪಿಎಫ್ಐ, ಎಸ್ ಡಿಪಿಐ ಜತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳಲ್ಲ, ಅದು ಏನೇದ್ರೂ ಬಿಜೆಪಿಯವರ ಕೆಲಸ. ಈಗಾಗಲೇ ಕಳೆದ ಬಾರಿ ಪಂಚಾಯ್ತಿ ಎಲೆಕ್ಷನ್ ನಲ್ಲಿ ಬಿಜೆಪಿ ಓವೈಸಿ ಜತೆ ಹೊಂದಾಣಿಕೆ ಮಾಡಿಕೊಂಡಿತ್ತು,
ಈ ಬಾರಿ ಕರ್ನಾಟಕದ ಚುನಾವಣೆಯಲ್ಲಿಯೂ ಒವೈಸಿ ಜೊತೆ ಒಳಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಮುಸ್ಲಿಮರ ಮತ ವಿಭಜಿಸಲು ಬಿಜೆಪಿ ಈ ತಂತ್ರಗಾರಿಕೆ ಹೆಣೆದಿದೆ ಎಂದರು.
ಒವೈಸಿ ಜೊತೆ ಬಿಜೆಪಿ ಮುಖಂಡರು ರಹಸ್ಯ ಮಾತುಕತೆ ನಡೆಸಿದ್ದಾರೆ. ಹೊಂದಾಣಿಕೆಯ ದಾಖಲೆ ತೋರಿಸುತ್ತೇನೆ. ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಬಿಜೆಪಿ ಒಳಒಪ್ಪಂದ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ ಎಂದು ಹೇಳಿದರು.