ನವದೆಹಲಿ: ನಾನು ಯಾವುದೇ ತಪ್ಪು ಮಾಡಿಲ್ಲ, ಜಾರಿ ನಿರ್ದೇಶನಾಲಯವನ್ನು ಎದುರಿಸುತ್ತೇನೆ ಎಂದು ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರು ಗುರುವಾರ ಹೇಳಿದ್ದು, ತೆಲಂಗಾಣದಲ್ಲಿ ಬಿಜೆಪಿ ಹಿಂಬಾಗಿಲಿನಿಂದ ಪ್ರವೇಶಿಸಲು ಸಾಧ್ಯವಾಗದ ಕಾರಣ ಕೇಂದ್ರ ಸರಕಾರವು ಇಡಿಯನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.
9 ರಾಜ್ಯಗಳಲ್ಲಿ ಬಿಜೆಪಿ ಹಿಂಬಾಗಿಲಿನ ಪ್ರವೇಶ
ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕವಿತಾ, 9 ರಾಜ್ಯಗಳಲ್ಲಿ ಬಿಜೆಪಿ ಹಿಂಬಾಗಿಲಿನ ಮೂಲಕ ಪ್ರವೇಶ ಮಾಡಿರುವುದನ್ನು ನಾವು ನೋಡಿದ್ದೇವೆ, ತೆಲಂಗಾಣದಲ್ಲಿ ಅದನ್ನು ಮಾಡಲು ಸಾಧ್ಯವಾಗುತ್ತಿಲ್ಲ, ಅದಕ್ಕಾಗಿಯೇ ಅವರು ಈಗ ಇಡಿ ಬಳಸುತ್ತಿದ್ದಾರೆ, ಆದರೆ ನಾವು ಹೆದರುವುದಿಲ್ಲ.ಜಾರಿ ನಿರ್ದೇಶನಾಲಯವನ್ನು ಎದುರಿಸುತ್ತೇವೆ. ನಾವು ಯಾವುದೇ ತಪ್ಪು ಮಾಡಿಲ್ಲ … ಬೆಲೆಗಳನ್ನು ಕಡಿಮೆ ಮಾಡಲು, ಹೆಚ್ಚಿನ ಸಬ್ಸಿಡಿಗಳು ಮತ್ತು ಉದ್ಯೋಗಗಳನ್ನು ನೀಡುವಂತೆ ನಾನು ಪ್ರಧಾನಿ ಮೋದಿಯವರನ್ನು ಒತ್ತಾಯಿಸುತ್ತೇನೆ. ನಮ್ಮಂತಹವರನ್ನು ಹಿಂಸಿಸುವುದರಿಂದ ನಿಮಗೆ ಏನು ಸಿಗುತ್ತದೆ ಎಂದು ಕಿಡಿ ಕಾರಿದರು.
ದೆಹಲಿಯ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಮತ್ತು ಎಂಎಲ್‌ಸಿ ಕವಿತಾ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ.
ಉಪವಾಸ ಸತ್ಯಾಗ್ರಹ
ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿರುವ ಕವಿತಾ, ವಿರೋಧ ಪಕ್ಷಗಳಿಗೆ ಕಿರುಕುಳ ನೀಡಲು ಕೇಂದ್ರವು ತನಿಖಾ ಸಂಸ್ಥೆಗಳನ್ನು ‘ದುರುಪಯೋಗ’ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರೂ, ಮಸೂದೆ ಅಂಗೀಕಾರವಾಗುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದರು. ಮಾರ್ಚ್ 10 ರಂದು ದೆಹಲಿಯಲ್ಲಿ ತಾನು ಪ್ರಸ್ತಾಪಿಸಿದ ಪ್ರತಿಭಟನೆಯಲ್ಲಿ 18 ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸುವಂತೆ ನಾನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕೋರುತ್ತೇನೆ. ಕೇಂದ್ರದಲ್ಲಿ ಸಮ್ಮಿಶ್ರ ಸರಕಾರವನ್ನು ಮುನ್ನಡೆಸುತ್ತಿದ್ದ ವೇಳೆ ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಶ್ಲಾಘಿಸಿದರು.