Advertisement

ಅಂತರ್ಧಾನ ಸ್ಥಿತಿಯಲ್ಲಿದ್ದ ರಮ್ಯಾ ಹಠಾತ್ ಪ್ರತ್ಯಕ್ಷಕ್ಕೆ ಮೀರ್‌ ಸಾದಿಕ್‌ ಕೈವಾಡ: ಬಿಜೆಪಿ

04:33 PM May 13, 2022 | Team Udayavani |

ಬೆಂಗಳೂರು: ನಟಿ, ಮಾಜಿ ಸಂಸದೆ ರಮ್ಯಾ ಅವರು ಡಿ.ಕೆ.ಶಿವಕುಮಾರ್ ಅವರನ್ನೇ ಪ್ರಶ್ನಿಸಿ ಮಾಡಿದ್ದ ಟ್ವೀಟ್ ಈಗ ಬಿಜೆಪಿಗೆ ದೊಡ್ಡ ಆಹಾರವಾಗಿದ್ದು, ಸರಣಿ ಟ್ವೀಟ್ ಗಾಲ ಮೂಲಕ ಮತ್ತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕರನ್ನು ಟೀಕಿಸಿದೆ.

Advertisement

”ಡಿಕೆಶಿ ಅವರೇ, ನಿಮ್ಮ ವಿರುದ್ಧ ಈಗ ನಡೆಯುತ್ತಿರುವುದು ಮೀರ್‌ ಸಾದಿಕ್ ಬಣದ ಸಂಚು. ಕಾಂಗ್ರೆಸ್ ಪಕ್ಷದಲ್ಲಿ ನಿಮ್ಮನ್ನು ಹಾಗೂ ನಿಮ್ಮ ತಂಡವನ್ನು ರೌಡಿಪಟ್ಟಿಗೆ ಸೇರಿಸುವ ತಂತ್ರ ನಡೆಯುತ್ತಿದೆ. ಮಾಜಿ ಸಚಿವ ಮಹಾದೇವಪ್ಪ ಅವರು ರಮ್ಯಾ ಪರ‌ ಬ್ಯಾಟ್ ಬೀಸಿದ್ದಾರೆಯೇ‌ ಹೊರತು ಡಿಕೆಶಿ ಪರವಲ್ಲ!” ಎಂದು ಇನ್ನೊಂದು ಟ್ವೀಟ್ ಮಾಡಿದೆ.

”ಮಹಾದೇವಪ್ಪ, ಸಿದ್ದರಾಮಯ್ಯ ಅತ್ಯಾಪ್ತರಲ್ಲೋರ್ವರು. ಸಿದ್ದರಾಮಯ್ಯ ಆಪ್ತರೆಲ್ಲಾ ರಮ್ಯಾ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ಇದೆಲ್ಲ ಏನನ್ನು ಸೂಚಿಸುತ್ತದೆ? ಮೀರ್‌ ಸಾದಿಕ್‌ ‌ಬಣ ಡಿಕೆಶಿಯನ್ನು ಹರಕೆಯ ಕುರಿಯಾಗಿಸಲು ಹೊರಟಿದೆಯೇ?” ಎಂದು ಪ್ರಶ್ನಿಸಿದೆ.

”ಇಷ್ಟು ದಿನಗಳ‌ ಕಾಲ “ಅಂತರ್ಧಾನ” ಸ್ಥಿತಿಯಲ್ಲಿದ್ದ ರಮ್ಯಾ ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸುತ್ತಾ ಹಠಾತ್ ಪ್ರತ್ಯಕ್ಷರಾಗಿದ್ದಾರೆ. ಈ ಅನಿರೀಕ್ಷಿತ ದಾಳಿಯ ಹಿಂದೆ ಮೀರ್‌ ಸಾದಿಕ್‌ ಕೈವಾಡವಿದೆ. ಡಿಕೆಶಿ ಅವರೇ, ನಿಮ್ಮ ವಿರೋಧಿ ಶಕ್ತಿಗಳ ಕೈ ಮೇಲಾಗುತ್ತಿದೆಯೇ? ರಾಜಸ್ಥಾನದಲ್ಲಿ ಕಾಂಗ್ರೆಸ್ ಚಿಂತನಾ ಸಭೆ ನಡೆಯುತ್ತಿದೆ. ರಾಹುಲ್ ಗಾಂಧಿಗೆ ಮತ್ತೆ ಎಐಸಿಸಿ ಪಟ್ಟ ಕಟ್ಟುವಂತೆ ಚರ್ಚೆ ನಡೆಯುತ್ತಿದೆ.ಇದೇ ವೇಳೆ ಸಿದ್ದರಾಮಯ್ಯ ಬಣ ಡಿಕೆಶಿ ವಿರುದ್ಧ ಒಳಸಂಚು ನಡೆಸುತ್ತಿದೆ. ಭ್ರಷ್ಟಾಧ್ಯಕ್ಷ ರಿಗೆ ರಮ್ಯಾ ಮಂಗಳಾರತಿ ಮಾಡಿದರೆ, ಸಿದ್ದರಾಮಯ್ಯ ಆಪ್ತರು ರಮ್ಯಾ ಪರ ನಿಲ್ಲುತ್ತಿದ್ದಾರೆ.” ಎಂದು ಕಾಂಗ್ರೆಸ್ ಒಳಜಗಳದ ಬಗ್ಗೆ ಟ್ವೀಟ್ ಮೂಲಕ ಗಾಯಕ್ಕೆ ಉಪ್ಪು ಹಾಕುವ ಕೆಲಸ ಬಿಜೆಪಿ ಮಾಡಿದೆ.

”ನನಗೆ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನಮಾನ ಕೊಡಿಸಿದ್ದು ರಾಹುಲ್ ಗಾಂಧಿ ಅವರೇ ಹೊರತು ಬೇರೆ ಯಾವುದೇ ಅವಕಾಶವಾದಿಗಳಲ್ಲ – ರಮ್ಯಾ ಮುಂದಿನ ಅಧ್ಯಕ್ಷ ರಾಹುಲ್ ಗಾಂಧಿ ಆಗಲಿ – ಚಿಂತನ ಶಿಬಿರ, ರಾಜಸ್ಥಾನ, ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ – ಬೆಂಬಲಿಗರು ಹರಕೆಯ ಕುರಿ – ಡಿಕೆಶಿ” ಎಂದು ಬಿಜೆಪಿ ಟ್ವೀಟ್ ಮಾಡಿ ಮೂದಲಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next