ಬೆಂಗಳೂರು : ಬೆಂಗಳೂರಿನ ಶೇ.60 ರಷ್ಟು ಜನರು ಕುಡಿಯುವ ಉದ್ದೇಶಕ್ಕಾಗಿ ಇನ್ನೂ ಅಂತರ್ಜಲವನ್ನು ಅವಲಂಬಿಸಿದ್ದಾರೆ ಎಂದು ಕಾಂಗ್ರೆಸ್ ಮಾಡಿರುವ ಟ್ವೀಟ್ ಗೆ ಬಿಜೆಪಿ ತಿರುಗೇಟು ನೀಡಿದ್ದು, ಸುಳ್ಳು ಕಾಂಗ್ರೆಸ್ ಮನೆ ದೇವರು ಎಂಬುದಕ್ಕೆ ಸಾಕ್ಷಿಯಿದು ಎಂದು ಲೇವಡಿ ಮಾಡಿದೆ.
”ರಾಜ್ಯದಲ್ಲಿ ಐದು ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಇದಾದ ಬಳಿಕ ಜೆಡಿಎಸ್ ಜೊತೆ ಸೇರಿ ಮೈತ್ರಿ ಸರ್ಕಾರ ರಚಿಸಿದರು.ಆಗ ಇದೇ ಭ್ರಷ್ಟಾಧ್ಯಕ್ಷ ಡಿ.ಕೆ.ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದರು.ಆಗೇಕೆ ಕಾಂಗ್ರೆಸ್ ಪಕ್ಷದ ನಾಯಕರಿಗೆ ಮೇಕೆದಾಟು ಕಾಳಜಿ ಇರಲಿಲ್ಲ? ಈಗ ಸುಳ್ಳಿನಜಾತ್ರೆ ಮಾಡುವ ಬದಲು ಸತ್ಯ ಶೋಧನೆ ಮಾಡಿಕೊಳ್ಳಿ” ಎಂದು ಟ್ವೀಟ್ ಮಾಡಿದೆ.
ಇನ್ನೊಂದು ಟ್ವೀಟ್ ನಲ್ಲಿ ”ಸುಳ್ಳು ಕಾಂಗ್ರೆಸ್ ಮನೆ ದೇವರು ಎಂಬುದಕ್ಕೆ ಇಲ್ಲೊಂದು ಸಾಕ್ಷಿಯಿದೆ. ಮೇಕೆದಾಟು ಪಾದಯಾತ್ರೆಗೆ ಹೊರಟಿರುವ ಕಾಂಗ್ರೆಸ್ ನೀರಿನ ವಿಚಾರದಲ್ಲಿ ಸುಳ್ಳು ಹೇಳುತ್ತಿದೆ. ಬೆಂಗಳೂರು ನಗರದ ಶೇ.60 ರಷ್ಟು ನೀರಿನ ಪೂರೈಕೆ ಈಗಲೂ ಅಂತರ್ಜಲವನ್ನು ಆಧರಿಸಿದೆಯಂತೆ. ಈಗ ಕಾವೇರಿಯನ್ನು ಹರಿಸುವುದಕ್ಕೆ ಹೊರಟಿದ್ದಾರೆ.ಎಂಥಹ ಸುಳ್ಳು!”ಎಂದು ಲೇವಡಿ ಮಾಡಿದೆ.
”ನಿಮಗೆ ಗೊತ್ತೇ, ಬೆಂಗಳೂರಿನ ಶೇ.60 ರಷ್ಟು ಜನರು ಕುಡಿಯುವ ಉದ್ದೇಶಕ್ಕಾಗಿ ಇನ್ನೂ ಅಂತರ್ಜಲವನ್ನು ಅವಲಂಬಿಸಿದ್ದಾರೆ, ಇದು ಪ್ರತಿ ನಿಮಿಷವೂ ಖಾಲಿಯಾಗುತ್ತಿದೆ? ಕುಡಿಯುವ ನೀರಿಗಾಗಿ ನಮ್ಮ ಹೋರಾಟದಲ್ಲಿ ಕೈಜೋಡಿಸಿ. ಜನವರಿ 9 ರಿಂದ 19 ರವರೆಗೆ ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.